ADVERTISEMENT

ಬ್ಯಾಂಕ್ ವಂಚನೆ: ತಲೆಮರೆಸಿಕೊಂಡಿದ್ದ ಅಪರಾಧಿಯನ್ನು 40 ವರ್ಷಗಳ ಬಳಿಕ ಬಂಧಿಸಿದ CBI

ಪಿಟಿಐ
Published 26 ಜೂನ್ 2025, 9:25 IST
Last Updated 26 ಜೂನ್ 2025, 9:25 IST
<div class="paragraphs"><p>ಸಿಬಿಐ ಲಾಂಛನ</p></div>

ಸಿಬಿಐ ಲಾಂಛನ

   

ನವದೆಹಲಿ: ಬ್ಯಾಂಕ್‌ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ 40 ವರ್ಷಗಳಿಂದ ತಲೆಮರೆಸಿಕೊಂಡಿದ್ದ ತಪ್ಪಿತಸ್ಥನನ್ನು ಸಿಬಿಐ ಬುಧವಾರ ಬಂಧಿಸಿದೆ.

ಬ್ಯಾಂಕ್‌ ಆಫ್‌ ಇಂಡಿಯಾಗೆ ₹ 5.69 ಲಕ್ಷ ವಂಚಿಸಿದ್ದ ಪ್ರಕರಣ ಸಂಬಂಧ 1985ರಲ್ಲಿ ಐದು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ಸತೀಶ್‌ ಕುಮಾರ್‌ ಆನಂದ್‌ ಎಂಬಾತನನ್ನು ತನಿಖಾಧಿಕಾರಿಗಳು ನಾಲ್ಕು ದಶಕಗಳ ನಂತರ ಬಂಧಿಸಿದ್ದಾರೆ ಎಂದು ಸಿಬಿಐ ತಿಳಿಸಿದೆ.

ADVERTISEMENT

ತಪ್ಪಿತಸ್ಥನನ್ನು ಉತ್ತರ ದೆಹಲಿಯ ರೋಹಿಣಿಯಲ್ಲಿ ಬಂಧಿಸಲಾಗಿದ್ದು, ಡೆಹ್ರಾಡೂನ್‌ಗೆ ಕರೆತರಲಾಗಿದೆ. ವಿಶೇಷ ನ್ಯಾಯಾಲಯದ ಎದುರು ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತನಿಖಾ ಸಂಸ್ಥೆಯ ವಕ್ತಾರರು ಮಾಹಿತಿ ನೀಡಿದ್ದಾರೆ.

1977ರಲ್ಲಿ ವಂಚನೆ ನಡೆದಿತ್ತು. ಕ್ರಿಮಿನಲ್‌ ಪಿತೂರಿ ನಡೆಸಿದ್ದ ಆನಂದ್‌, ನಕಲಿ ರಶೀದಿಗಳು, ದಾಖಲೆಗಳ ಆಧಾರದಲ್ಲಿ ಸಾಲ ಪಡೆದಿದ್ದ. ಅದರಿಂದ ಬ್ಯಾಂಕ್‌ಗೆ ನಷ್ಟ ಉಂಟಾದರೆ, ಆನಂದ್‌ ₹ 5.69 ಲಕ್ಷ ಲಾಭ ಮಾಡಿಕೊಂಡಿದ್ದ.

ಈ ಸಂಬಂಧ ಆನಂದ್‌, ಆಗಿನ ಬ್ಯಾಂಕ್‌ ವ್ಯವಸ್ಥಾಪಕ ಹಾಗೂ ಮತ್ತೊಬ್ಬ ಆರೋಪಿ ಅಶೋಕ್‌ ಕುಮಾರ್‌ ಎಂಬವರ ವಿರುದ್ಧ 1978ರ ಮೇ 5ರಂದು ಪ್ರಕರಣ ದಾಖಲಿಸಿಕೊಂಡಿದ್ದ ಸಿಬಿಐ, ತನಿಖೆ ಬಳಿಕ ವಿಶೇಷ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿತ್ತು.

ಅದರಂತೆ ಸಿಬಿಐ ನ್ಯಾಯಾಲಯವು 1985ರ ಜೂನ್ 19ರಂದು ತೀರ್ಪು ನೀಡಿತ್ತು. ವ್ಯವಸ್ಥಾಪಕರನ್ನು ಪ್ರಕರಣದಿಂದ ಖುಲಾಸೆಗೊಳಿಸಿ, ಆನಂದ್‌ ಹಾಗೂ ಕುಮಾರ್‌ಗೆ ತಲಾ ₹ 15,000 ದಂಡ ಹಾಗೂ 5 ವರ್ಷ ಶಿಕ್ಷೆ ವಿಧಿಸಿತ್ತು.

ಆದರೆ, ಆನಂದ್‌ ದೋಷಿ ಎಂದು ಸಾಬೀತಾದಾಗಿನಿಂದ ತಲೆಮರೆಸಿಕೊಂಡಿದ್ದ. ನ್ಯಾಯಾಲಯವು 2009ರ ನವೆಂಬರ್‌ 30ರಂದು ಆತನನ್ನು 'ಘೋಷಿತ ಅಪರಾಧಿ' ಎಂದು ಘೋಷಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.