ನವದೆಹಲಿ: ಸೈಬರ್ ವಂಚಕರ ಜಾಲವೊಂದನ್ನು ಭೇದಿಸಿರುವ ಸಿಬಿಐ, ಮೂರು ಕಡೆ ಕಾರ್ಯಾಚರಣೆ ನಡೆಸಿ, ಆರೋಪಿಯೊಬ್ಬನನ್ನು ಬಂಧಿಸಿ ₹2.8 ಕೋಟಿ ಮೌಲ್ಯದ ಕ್ರಿಪ್ಟೊ ಕರೆನ್ಸಿ, ₹22 ಲಕ್ಷ ನಗದನ್ನು ವಶಕ್ಕೆ ಪಡೆದಿದೆ.
ರಾಹುಲ್ ಅರೋರ ಬಂಧಿತ ಆರೋಪಿ. ಈತನನ್ನು ಒಳಗೊಂಡ ವಂಚಕರ ತಂಡವು ಸರ್ಕಾರಿ ಅಧಿಕಾರಿಗಳು, ಹೆಸರಾಂತ ತಾಂತ್ರಿಕ ಕಂಪನಿಗಳ ಹೆಸರಿನಲ್ಲಿ ಅಮೆರಿಕ ಮತ್ತು ಕೆನಡಾದಲ್ಲಿ ನೆಲೆಸಿದ್ದ ಕೆಲವು ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ವಂಚನೆ ಎಸಗುತ್ತಿತ್ತು.
‘ಸೈಬರ್ ವಂಚಕರ ತಂಡದ ಕಾರ್ಯಾಚರಣೆ ಬಗ್ಗೆ ಸಾಕಷ್ಟು ಮಾಹಿತಿ ಲಭಿಸಿವೆ. ಕರೆ ಮಾಡಿದ ವ್ಯಕ್ತಿಯ ಮೂಲವನ್ನು ಕಂಡುಹಿಡಿಯಲು ಸಾಧ್ಯವಿಲ್ಲದಂತಹ ಉಪಕರಣವೊಂದನ್ನು ಅಭಿವೃದ್ಧಿಪಡಿಸಿದ್ದ ವಂಚಕರು ಅದನ್ನು ಬಳಸಿಕೊಂಡು ಅಂತರರಾಷ್ಟ್ರೀಯ ಕರೆಗಳನ್ನು ಮಾಡಿ, ವಂಚನೆ ಎಸಗುತ್ತಿದ್ದರು’ ಎಂದು ಸಿಬಿಐ ವಕ್ತಾರರೊಬ್ಬರು ತಿಳಿಸಿದ್ದಾರೆ.
‘ಸೈಬರ್ ವಂಚನೆ ಪ್ರಕರಣಗಳಲ್ಲಿ, ಆರೋಪಿಗಳಿಂದ ಜಫ್ತಿ ಮಾಡುವ ವರ್ಚುವಲ್ ಡಿಜಿಟಲ್ ಅಸೆಟ್ಸ್‌ಗಳಲ್ಲಿ (ವಿಡಿಎ) ಇರುವ ಮಾಹಿತಿಯನ್ನು ಸಂಗ್ರಹಿಸುವ, ನಿರ್ವಹಿಸುವ ತಂತ್ರಜ್ಞಾನವನ್ನೂ ಸಿಬಿಐ ಹೊಂದಿದೆ’ ಎಂದು ಅವರು ಹೇಳಿದರು.
ಸೈಬರ್ ಅಪರಾಧಗಳ ನಿಗ್ರಹಕ್ಕೆ ಸಿಬಿಐ ಆರಂಭಿಸಿರುವ ‘ಚಕ್ರ–5’ ಕಾರ್ಯಾಚರಣೆಯ ಭಾಗವಾಗಿ ಈ ಬಂಧನ ನಡೆದಿದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.