ADVERTISEMENT

ದೆಹಲಿ ಅಬಕಾರಿ ನೀತಿ ಪ್ರಕರಣ: ಉದ್ಯಮಿ, ಲೆಕ್ಕಪರಿಶೋಧಕ ಬಂಧನ

ಪಿಟಿಐ
Published 8 ಫೆಬ್ರುವರಿ 2023, 15:39 IST
Last Updated 8 ಫೆಬ್ರುವರಿ 2023, 15:39 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೆಹಲಿಯ ಅಬಕಾರಿ ನೀತಿಗೆ ಸಂಬಂಧಿಸಿ ಹೈದರಾಬಾದ್‌ ಮೂಲದ ಲೆಕ್ಕಪರಿಶೋಧಕ ಬುಚ್ಚಿಬಾಬು ಗೊರಂಟ್ಲಾ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.

‘ವಿಚಾರಣೆಗೆ ದೆಹಲಿಗೆ ಕರೆಸಲಾಗಿತ್ತು. ತನಿಖೆಗೆ ಸಹಕರಿಸಲಿಲ್ಲ, ಸೂಕ್ತವಾಗಿ ಪ್ರತಿಕ್ರಿಯಿಸಲಿಲ್ಲ. ಹೀಗಾಗಿ, ಮಂಗಳವಾರ ಸಂಜೆ ಬಂಧಿಸಲಾಯಿತು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿಯ ಅಬಕಾರಿ ನೀತಿ ರಚನೆ ಮತ್ತು ಜಾರಿಯಲ್ಲಿ ಇವರ ಪಾತ್ರದಿಂದಾಗಿ ಹೈದರಾಬಾದ್‌ ಮೂಲದ ಸಗಟು, ಬಿಡಿ ಸನ್ನದುದಾರರು ಮತ್ತು ಅವುಗಳ ಮಾಲೀಕರಿಗೆ ಹೆಚ್ಚಿನ ಅನುಕೂಲವಾಗಿದೆ ಎಂದು ಸಿಬಿಐ ಆರೋಪಿಸಿದೆ.

ADVERTISEMENT

ಇವರು ಬಿಆರ್‌ಎಸ್‌ ಶಾಸಕಿ, ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರ ಪುತ್ರಿ ಕವಿತಾ ಅವರ ಲೆಕ್ಕಪರಿಶೋಧಕರಾಗಿದ್ದರು ಎನ್ನಲಾಗಿದೆ. ಸಿಬಿಐ ಅಧಿಕಾರಿಗಳು ಕಳೆದ ಡಿಸೆಂಬರ್‌ನಲ್ಲಿ ಕವಿತಾ ಅವರನ್ನು ವಿಚಾರಣೆಗೆ ಒಳಪಡಿಸಿದ್ದರು.

ಪಂಜಾಬ್ ಉದ್ಯಮಿ ಬಂಧನ: ಇನ್ನೊಂದೆಡೆ ಇದೇ ಪ್ರಕರಣದ ಸಂಬಂಧ ಪಂಜಾಬ್ ಮೂಲದ ಉದ್ಯಮಿ ಗೌತಮ್‌ ಮಲ್ಹೋತ್ರಾ ಅವರನ್ನು ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ.

ಪಂಜಾಬ್‌ನ ಓಯೆಸಿಸ್ ಸಮೂಹದ ಜೊತೆಗೆ ಸಂಪರ್ಕವುಳ್ಳ ಮಲ್ಹೋತ್ರಾ ಅವರನ್ನು ಹಣ ಅಕ್ರಮ ವರ್ಗಾವಣೆ ಪ್ರಕರಣದ ಸಂಬಂಧ ಬಂಧಿಸಲಾಗಿದೆ. ಅವರನ್ನು ಕೋರ್ಟ್‌ಗೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗೆ ವಶಕ್ಕೆ ಒಪ್ಪಿಸುವಂತೆ ಕೋರಲಾಗುವುದು ಎಂದು ಇ.ಡಿ. ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.