ADVERTISEMENT

ಬ್ಯಾಂಕ್‌ಗೆ ₹409 ಕೋಟಿ ವಂಚನೆ: ಮಹಾರಾಷ್ಟ್ರ ಶಾಸಕನ ವಿರುದ್ಧ ಸಿಬಿಐನಿಂದ ಪ್ರಕರಣ

ಪಿಟಿಐ
Published 10 ಫೆಬ್ರುವರಿ 2023, 15:27 IST
Last Updated 10 ಫೆಬ್ರುವರಿ 2023, 15:27 IST
   

ನವದೆಹಲಿ: ಮಹಾರಾಷ್ಟ್ರದ ಶಾಸಕ ಹಾಗೂ ಸಕ್ಕರೆ ಉದ್ಯಮಿ ರತ್ನಾಕರ್ ಗುತ್ತೆ ಹಾಗೂ ಗಂಗಾಖೇಡ್ ಶುಗರ್ ಅಂಡ್ ಎನರ್ಜಿ ಲಿಮಿಟೇಡ್ ವಿರುದ್ಧ ₹409.26 ಕೋಟಿ ವಂಚನೆ ಆರೋಪ ಸಂಬಂಧ ಎಫ್‌ಐಆರ್ ದಾಖಲಾಗಿದೆ.

2019ರ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಸಮಾಜ ಪಕ್ಷದಿಂದ ಗಂಗಾಖೇಡ್ ಕ್ಷೇತ್ರದಿಂದ ಗೆದ್ದು ಶಾಸಕರಾಗಿರುವ ರತ್ನಾಕರ್, ಅವರ ಮಕ್ಕಳು ಹಾಗೂ ಕುಟುಂಬದ ಇತರ ಸದಸ್ಯರ ವಿರುದ್ಧವೂ ಪ್ರಕರಣ ದಾಖಲಾಗಿವೆ.

ಸಿಬಿಐ ಪ್ರಕಾರ ಗುತ್ತೆ, ಗಂಗಾಖೇಡ್ ಶುಗರ್ ಅಂಡ್ ಎನರ್ಜಿ ಲಿಮಿಟೇಡ್‌ನ ನಿರ್ದೆಶಕರಲ್ಲಿ ಒಬ್ಬರು.

ADVERTISEMENT

2008 ಮತ್ತು 2015ರ ನಡುವೆ ಯುಕೊ ಬ್ಯಾಂಕ್ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟದಿಂದ ಗಂಗಾಖೇಡ್ ಶುಗರ್ ಅಂಡ್ ಎನರ್ಜಿ ಲಿಮಿಟೆಡ್ ಟರ್ಮ್ ಲೋನ್, ವರ್ಕಿಂಗ್ ಕ್ಯಾಪಿಟಲ್ ಸೌಲಭ್ಯ ಮತ್ತು ಇತರ ಸಾಲ ಸೌಲಭ್ಯಗಳ ರೂಪದಲ್ಲಿ ₹577.16 ಕೋಟಿಯನ್ನು ಪಡೆದುಕೊಂಡಿದೆ ಎಂದು ಸಿಬಿಐ ಅಧಿಕಾರಿಗಳು ಹೇಳಿದ್ದಾರೆ.

ನಾಗ್ಪುರದ ಎರಡು ಮತ್ತು ಪರ್ಬಾನಿಯ 3 ಪ್ರದೇಶಗಳು ಸೇರಿ ಗುತ್ತೆ ಮತ್ತು ಇತರೆ ಆರೋಪಿಗಳಿಗೆ ಸಂಬಂಧಿಸಿದ ಪ್ರದೇಶಗಳಲ್ಲಿ ಸಿಬಿಐ ದಾಳಿ ನಡೆಸಿತ್ತು.

ಕ್ರಿಮಿನಲ್ ಸಂಚು, ವಂಚನೆ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆ ಅಡಿ ಗುತ್ತೆ ಅವರ ಮಕ್ಕಳು ಮತ್ತು ಕುಟುಂಬದ ಸದಸ್ಯರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ.

ಹಣ ಅಕ್ರಮ ವರ್ಗಾವಣೆ ಆರೋಪದಲ್ಲಿ ಗುತ್ತೆ ಮತ್ತು ಗಂಗಾಖೇಡ್ ಶುಗರ್ ಅಂಡ್ ಎನರ್ಜಿ ಲಿಮಿಟೆಡ್ ವಿರುದ್ಧ ಜಾರಿ ನಿರ್ದೇಶನಾಲಯವು ಡಿಸೆಂಬರ್‌ನಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.