ADVERTISEMENT

ಹಿಮಾಚಲ ಪ್ರದೇಶ | ಪ್ರಶ್ನೆಪತ್ರಿಕೆ ಸೋರಿಕೆ: 88 ಮಂದಿ ವಿರುದ್ಧ ದೋಷಾರೋಪ

ಪಿಟಿಐ
Published 11 ಮಾರ್ಚ್ 2024, 15:34 IST
Last Updated 11 ಮಾರ್ಚ್ 2024, 15:34 IST
   

ನವದೆಹಲಿ: ‘2022ರಲ್ಲಿ ಹಿಮಾಚಲ ಪ್ರದೇಶದಲ್ಲಿ ನಡೆದ ಪೊಲೀಸ್‌ ಕಾನ್‌ಸ್ಟೆಬಲ್‌ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ 88 ಮಂದಿ ವಿರುದ್ಧ ಸಿಬಿಐ ಎರಡು ದೋಷಾರೋಪ ಪಟ್ಟಿಗಳನ್ನು ಸಲ್ಲಿಸಿದೆ’ ಎಂದು ಅಧಿಕಾರಿಗಳು ಹೇಳಿದರು.

ಶಿಮ್ಲಾದಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿರುವ ತನಿಖಾ ಸಂಸ್ಥೆಯು, ‘ಬಿಹಾರ ರಾಜ್ಯದ ಲಖಿಸರೈ ನಿವಾಸಿ ಭರತ್‌ ಕುಮಾರ್‌ ಯಾದವ್‌ ಮತ್ತು ನಾವಾಡ ನಿವಾಸಿ ಅರವಿಂದ್‌ ಅವರು ಪ್ರಶ್ನೆ ಪತ್ರಿಕೆಯನ್ನು ಕದ್ದು, ಮಂಡಿ, ಕಾಂಗ್ರಾ, ಚಂಡೀಗಢ, ಪಂಚಕುಲ, ಜಿರಾಕ್‌ಪುರ, ಮೊಹಾಲಿ ಹಾಗೂ ಇತರ ಸ್ಥಳಗಳಲ್ಲಿನ ಅಭ್ಯರ್ಥಿಗಳಿಗೆ ಮಧ್ಯವರ್ತಿಗಳ ಮೂಲಕ ₹3 ಲಕ್ಷದಿಂದ ₹4 ಲಕ್ಷದವರೆಗೆ ಮಾರಾಟ ಮಾಡಿದ್ದರು’ ಎಂದು ಆರೋಪಿಸಿದೆ.

‘ಬಿಹಾರ, ಉತ್ತರಪ್ರದೇಶ, ಹಿಮಾಚಲ ಪ್ರದೇಶ, ಉತ್ತರಾಖಂಡ, ದೆಹಲಿ ಹಾಗೂ ಹರಿಯಾಣದಲ್ಲಿನ ಬಹು ಸಂಘಟಿತ ಗುಂಪುಗಳು ಈ ಸಂಚಿನಲ್ಲಿ ಭಾಗಿಯಾಗಿರುವ ಸಾಧ್ಯತೆ ಇದೆ. ಹಾಗೆಯೇ ನಳಂದ (ಬಿಹಾರ), ಕಾಂಗ್ರಾ (ಹಿಮಾಚಲ ಪ್ರದೇಶ), ರೋಹ್‌ಟಕ್‌ (ಹರಿಯಾಣ), ದೆಹಲಿ ಮತ್ತು ಜಮ್ಮುವಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕೇಂದ್ರಗಳನ್ನು ನಡೆಸುತ್ತಿದ್ದವರೂ ಇದರಲ್ಲಿ ಭಾಗಿಯಾಗಿದ್ದಾರೆ’ ಎಂದು ಸಿಬಿಐ ಹೇಳಿದೆ.

ADVERTISEMENT

ಯಾರ ವಿರುದ್ಧ ದೋಷಾರೋಪ?

‘ನಳಂದದ ಪಾಸ್ಕಲ್‌ ಕೋಚಿಂಗ್‌ ಸೆಂಟರ್‌ನ ರಂಜಿತ್‌ ಕುಮಾರ್‌, ಕಾಂಗ್ರಾದ ಠಾಕೂರ್‌ ಕಾಶಿರಾಮ್‌ ವೆಬ್‌ ಸಲ್ಯೂಷನ್ಸ್‌ನ ಬಿಜೇಂದರ್‌ ಸಿಂಗ್‌, ರೋಹ್‌ಟಕ್‌ನ ಭಾಸ್ಕರ್‌ ಅಕಾಡೆಮಿಯ ಅನಿಲ್‌ ಭಾಸ್ಕರ್‌, ದೆಹಲಿಯ ಜೀರೊ ಪ್ಲಸ್ ಕನ್ಸಲ್ಟೆಂಟ್‌ ಸರ್ವೀಸಸ್‌ನ ಚಿರಂಜೀವಿ ಚಿಂತನ್‌, ಕಾಂಗ್ರಾದ ಕಮ್ಯಾಂಡೋ ಡಿಫೆನ್ಸ್‌ ಅಕಾಡೆಮಿಯ ಸುನಿಲ್‌ ಕುಮಾರ್, ಜಮ್ಮುವಿನಲ್ಲಿ ಆನ್‌ಲೈನ್‌ ಪರೀಕ್ಷೆಗಾಗಿ ಕಂಪ್ಯೂಟರ್‌ ಪ‍್ರಯೋಗಾಲಯ ನಡೆಸುತ್ತಿರುವ ರಾಜ್‌ ಕುಮಾರ್ ವಿರುದ್ಧ ಸಿಬಿಐ ದೋಷಾರೋಪ ಸಲ್ಲಿಸಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ತನಿಖೆಯ ವೇಳೆ ಈ ಖಾಸಗಿ ತರಬೇತಿ ಕೇಂದ್ರಗಳ ಪಾತ್ರ ಕಂಡುಬಂದದ್ದರಿಂದ ಇವುಗಳ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಎನ್‌ಟಿಎಗೆ (ನ್ಯಾಷನಲ್‌ ಟೆಸ್ಟಿಂಗ್‌ ಏಜೆನ್ಸಿ) ಸಿಬಿಐ ಹೇಳಿದೆ. ಅಲ್ಲದೇ ರೈಲ್ವೆ ಇಲಾಖೆ, ಹಿಮಾಚಲ ಪ್ರದೇಶ ಶಿಕ್ಷಣ ಇಲಾಖೆ, ರಾಜ್ಯದ ವಿದ್ಯುತ್‌ ಮಂಡಳಿ, ಚಂಡೀಗಢ ಪೊಲೀಸ್‌ ಇಲಾಖೆ, ದೆಹಲಿ ಸರ್ಕಾರ, ರಕ್ಷಣಾ ಇಲಾಖೆ– ಈ ಎಲ್ಲವುಗಳ ಅನೇಕ ಹಾಲಿ ಮತ್ತು ಮಾಜಿ ಅಧಿಕಾರಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ’ ಎಂದೂ ಅವರು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.