
ಕೇಂದ್ರ ಜಾಗೃತ ಆಯೋಗದ (ಸಿವಿಸಿ) ಇತ್ತೀಚಿನ ವಾರ್ಷಿಕ ವರದಿಯು ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಿಬಿಐ ನಡೆಸುತ್ತಿರುವ ತನಿಖೆಯ ಪ್ರಗತಿಯನ್ನು ತೆರೆದಿಟ್ಟಿದೆ. ಸಿಬಿಐ ತನಿಖೆ ನಡೆಸುತ್ತಿರುವ 7 ಸಾವಿರಕ್ಕೂ ಹೆಚ್ಚು ಭ್ರಷ್ಟಾಚಾರ ಪ್ರಕರಣಗಳು ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಇವೆ. ಇವುಗಳಲ್ಲಿ 379 ಪ್ರಕರಣಗಳ ವಿಚಾರಣೆ 20 ವರ್ಷಗಳಿಗೂ ಹೆಚ್ಚು ಕಾಲದಿಂದ ನಡೆಯುತ್ತಿದೆ ಎನ್ನುತ್ತದೆ ಈ ವರದಿ.
ನವದೆಹಲಿ: ಕೇಂದ್ರ ಜಾಗೃತ ಆಯೋಗವು (ಸಿವಿಸಿ) 2024 ಡಿಸೆಂಬರ್ 31ರವರೆಗಿನ ಅಂಕಿ ಅಂಶವನ್ನು ಬಿಡುಗಡೆ ಮಾಡಿದ್ದು, ಭ್ರಷ್ಟಾಚಾರದ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸಿರುವ ಒಟ್ಟು 7,072 ಪ್ರಕರಣಗಳು ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಉಳಿದಿವೆ. 2,660 ಪ್ರಕರಣಗಳು 10 ವರ್ಷಗಳಿಂದ ವಿಚಾರಣಾ ಹಂತದಲ್ಲೇ ಇವೆ ಎಂದು ಹೇಳಿದೆ.
ಭ್ರಷ್ಟಾಚಾರ ಪ್ರಕರಣಗಳು ಮಾತ್ರವಲ್ಲ, ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಿಬಿಐ ಮತ್ತು ಆರೋಪಿಗಳು ಸಲ್ಲಿಸಿರುವ ಸುಮಾರು 13,100 ಮೇಲ್ಮನವಿಗಳು/ ಮರು ಪರಿಶೀಲನಾ ಅರ್ಜಿಗಳು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇವೆ. ಇವುಗಳಲ್ಲಿ 606 ಮೇಲ್ಮನವಿಗಳ ವಿಚಾರಣೆ 20 ವರ್ಷಗಳಿಂದ ಹಾಗೂ 1,227 ಮನವಿಗಳ ವಿಚಾರಣೆ 15 ವರ್ಷಗಳಿಂದ ಬಾಕಿ ಉಳಿದಿದೆ.
2024ರಲ್ಲಿ ಸಿಬಿಐ ದಾಖಲಿಸಿದ 644 ಪ್ರಕರಣಗಳಲ್ಲಿ ವಿಚಾರಣೆ ಪೂರ್ಣಗೊಳಿಸಿ ಆದೇಶ ಪ್ರಕಟಿಸಲಾಗಿದೆ. ಇದರಲ್ಲಿ 392 ಪ್ರಕರಣಗಳಲ್ಲಿ ಅಪರಾಧ ಸಾಬೀತಾಗಿದೆ. 154 ಪ್ರಕರಣಗಳಲ್ಲಿ ಆರೋಪಿಗಳನ್ನು ನಿರ್ದೋಷಿ ಎಂದು ಘೋಷಿಸಲಾಗಿದೆ. 21 ಪ್ರಕರಣಗಳನ್ನು ಖುಲಾಸೆಗೊಳಿಸಲಾಗಿದೆ. 77 ಪ್ರಕರಣಗಳನ್ನು ಅನ್ಯ ಕಾರಣಗಳಿಗಾಗಿ ವಿಲೇವಾರಿ ಮಾಡಲಾಗಿದೆ. 2024ರಲ್ಲಿ ಶಿಕ್ಷೆಯ ಪ್ರಮಾಣ ಶೇಕಡ 69.14ರಷ್ಟಿದ್ದರೆ 2023ರಲ್ಲಿ ಇದು ಶೇ 71.47ರಷ್ಟಿತ್ತು ಎಂದೂ ಸಿವಿಸಿ ವರದಿ ಹೇಳಿದೆ.
2024ರ ಅಂತ್ಯದ ವೇಳೆಗೆ ವಿವಿಧ ನ್ಯಾಯಾಲಯಗಳಲ್ಲಿ ಭ್ರಷ್ಟಾಚಾರ ಮತ್ತು ಇತರೆ ಪ್ರಕರಣಗಳು ಸೇರಿ ಸಿಬಿಐ ತನಿಖೆಗೆ ಸಂಬಂಧಿಸಿದ ಒಟ್ಟು 11,384 ಪ್ರಕರಣಗಳು ವಿಚಾರಣೆಗೆ ಬಾಕಿ ಇದ್ದವು.
ವಿಳಂಬಕ್ಕೆ ಹಲವು ಕಾರಣ
ಕೆಲಸದ ಒತ್ತಡ ಸಿಬ್ಬಂದಿ ಕೊರತೆ ದೊಡ್ಡ ಪ್ರಮಾಣದ ದಾಖಲೆಗಳ ಪರಿಶೀಲನೆ ಕೋರ್ಟ್ ಅನುಮತಿ ಪ್ರಾಸಿಕ್ಯೂಷನ್‌ಗೆ ಒಪ್ಪಿಗೆ ಪಡೆಯುವಲ್ಲಿನ ವಿಳಂಬ ಸೇರಿ ಹಲವು ಕಾರಣಗಳಿಂದ ಭ್ರಷ್ಟಾಚಾರ ಪ್ರಕರಣಗಳ ತನಿಖೆ ವಿಶೇಷವಾಗಿ ಬ್ಯಾಂಕ್ ವಂಚನೆ ಆರ್ಥಿಕ ಅಪರಾಧಗಳ ತನಿಖೆ ತಡವಾಗುತ್ತಿದೆ. ಹೀಗಾಗಿ ಸಾವಿರಾರು ಪ್ರಕರಣಗಳು ನ್ಯಾಯಾಲಯಗಳಲ್ಲಿ ವರ್ಷಗಳಿಂದ ವಿಚಾರಣೆಗೆ ಬಾಕಿ ಉಳಿದಿವೆ ಎಂದು ಸಿವಿಸಿ ವರದಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.