ADVERTISEMENT

ಸಂದೇಶ್‌ಖಾಲಿ: ಸಿಬಿಐಗೆ ತನಿಖೆ ವರ್ಗಾಯಿಸಲು ಕಲ್ಕತ್ತ ಹೈಕೋರ್ಟ್‌ ಆದೇಶ

ಪಿಟಿಐ
Published 5 ಮಾರ್ಚ್ 2024, 18:50 IST
Last Updated 5 ಮಾರ್ಚ್ 2024, 18:50 IST
<div class="paragraphs"><p> ಹೈಕೋರ್ಟ್‌ ಆದೇಶ</p></div>

ಹೈಕೋರ್ಟ್‌ ಆದೇಶ

   

ನವದೆಹಲಿ/ಕೋಲ್ಕತ್ತ : ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳ ಮೇಲೆ ಸಂದೇಶ್‌
ಖಾಲಿಯಲ್ಲಿ ನಡೆದ ದಾಳಿ ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಬೇಕು ಎಂದು ಪಶ್ಚಿಮ ಬಂಗಾಳ ಸರ್ಕಾರಕ್ಕೆ ಕಲ್ಕತ್ತ ಹೈಕೋರ್ಟ್‌ ಮಂಗಳವಾರ ನಿರ್ದೇಶನ ನೀಡಿದೆ.

ಅಲ್ಲದೇ, ಪ್ರಕರಣದ ಪ್ರಮುಖ ಆರೋಪಿ, ಟಿಎಂಸಿಯಿಂದ ಅಮಾನತುಗೊಂಡಿರುವ ಶಹಜಹಾನ್‌ ಶೇಖ್‌ ಅವರನ್ನು ಸಿಬಿಐ ವಶಕ್ಕೆ ಒಪ್ಪಿಸಬೇಕು ಎಂದೂ ಹೈಕೋರ್ಟ್‌ ನಿರ್ದೇಶನ ನೀಡಿದೆ.

ADVERTISEMENT

ಆದರೆ, ಶಹಜಹಾನ್‌ ಶೇಖ್‌ ಅವರನ್ನು ವಶಕ್ಕೆ ಪಡೆಯಲು ಸಿಬಿಐ ವಿಫಲವಾಯಿತು.

ಹೈಕೋರ್ಟ್‌ ಆದೇಶ ನೀಡಿದ ಬೆನ್ನಲ್ಲೇ, ಶಹಜಹಾನ್‌ ಶೇಖ್‌ ಅವರನ್ನು ವಶಕ್ಕೆ ಪಡೆಯುವುದಕ್ಕಾಗಿ ಸಿಬಿಐ ಅಧಿಕಾರಿಗಳಿದ್ದ ಒಂದು ತಂಡ ಸಿಆರ್‌ಪಿಎಫ್‌ ಸಿಬ್ಬಂದಿಯೊಂದಿಗೆ ಕೋಲ್ಕತ್ತದ ಭವಾನಿ ಭವನದಲ್ಲಿರುವ ಸಿಐಡಿ ಕೇಂದ್ರ ಕಚೇರಿಗೆ ತೆರಳಿತು.

ರಾತ್ರಿ 7.30ರ ವರೆಗೆ ಕಾದ ಸಿಬಿಐ ತಂಡ, ಬರಿಗೈಲಿ ವಾಪಸಾಯಿತು. ‘ಹೈಕೋರ್ಟ್‌ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಹೀಗಾಗಿ, ಶೇಖ್‌ ಅವರನ್ನು ಸಿಬಿಐಗೆ ಹಸ್ತಾಂತರಿಸಿಲ್ಲ’ ಎಂದು ಸಿಐಡಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇನ್ನೊಂದೆಡೆ, ಪ್ರಕರಣದ ತನಿಖೆಯನ್ನು ವಹಿಸಿಕೊಳ್ಳುವುದಕ್ಕಾಗಿ ಸಿಬಿಐ ಅಧಿಕಾರಿಗಳು ಪಶ್ಚಿಮ ಬಂಗಾಳ ಪೊಲೀಸರನ್ನು ಸಂಪರ್ಕಿಸಿದರು.

ಈ ಬೆಳವಣಿಗೆ ಬೆನ್ನಲ್ಲೇ, ಕಲ್ಕತ್ತ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಪಶ್ಚಿಮ ಬಂಗಾಳ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತು.

ಅರ್ಜಿಯ ತುರ್ತು ವಿಚಾರಣೆ ನಡೆಸುವಂತೆ ಪಶ್ಚಿಮ ಬಂಗಾಳ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ ಹಾಗೂ ದೀಪಂಕರ್ ದತ್ತ ಅವರಿದ್ದ ನ್ಯಾಯಪೀಠಕ್ಕೆ ಮನವಿ ಮಾಡಿದರು.  

ತುರ್ತು ವಿಚಾರಣೆಗೆ ನಿರಾಕರಿಸಿದ ನ್ಯಾಯಪೀಠ, ಅರ್ಜಿಯನ್ನು ವಿಚಾರಣೆ ಪಟ್ಟಿಗೆ ಸೇರಿಸುವ ಸಂಬಂಧ, ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್‌ ಜನರಲ್‌ ಅವರಿಗೆ ಮನವಿ ಸಲ್ಲಿಸುವಂತೆ ಸಿಂಘ್ವಿ ಅವರಿಗೆ ಸೂಚಿಸಿತು.

ಪ್ರತ್ಯೇಕ ಅರ್ಜಿ: ಜನವರಿ 5ರಂದು ಸಂದೇಶ್‌ಖಾಲಿಯಲ್ಲಿ ಇ.ಡಿ ಅಧಿಕಾರಿ ಗಳ ಮೇಲೆ ಹಲ್ಲೆ ನಡೆದಿತ್ತು. 

ಅಧಿಕಾರಿಗಳ ಮೇಲಿನ ಹಲ್ಲೆ ಪ್ರಕರಣದ ತನಿಖೆಗೆ ಪಶ್ಚಿಮ ಬಂಗಾಳ ಪೊಲೀಸರು ಹಾಗೂ ಸಿಬಿಐ ಅಧಿಕಾರಿಗಳನ್ನು ಒಳಗೊಂಡ ಜಂಟಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವಂತೆ ಕಲ್ಕತ್ತ ಹೈಕೋರ್ಟ್‌ ಜನವರಿ 17ರಂದು ಆದೇಶಿಸಿತ್ತು.

ಪ್ರಕರಣದ ಪ್ರಮುಖ ಆರೋಪಿ ಶಹಜಹಾನ್‌ ಶೇಖ್‌ ಅವರನ್ನು ಪಶ್ಚಿಮ ಬಂಗಾಳ ಪೊಲೀಸರು ಫೆ.29ರಂದು ಬಂಧಿಸಿದ್ದರು.

ಎಸ್‌ಐಟಿ ರಚನೆಗೆ ಸಂಬಂಧಿಸಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಇ.ಡಿ ಹಾಗೂ ಪಶ್ಚಿಮ ಬಂಗಾಳ ಸರ್ಕಾರ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿದ್ದವು. ತನಿಖೆಯನ್ನು ಸಿಬಿಐಗೆ ವಹಿಸುವಂತೆ ಇ.ಡಿ ಕೋರಿದ್ದರೆ, ರಾಜ್ಯ ಪೊಲೀಸರಿಗೆ  ವಹಿಸುವಂತೆ ಪಶ್ಚಿಮ ಬಂಗಾಳ ಸರ್ಕಾರ ಮನವಿ ಮಾಡಿತ್ತು.

ಅರ್ಜಿ ವಿಚಾರಣೆಯನ್ನು ಮಂಗಳವಾರ ನಡೆಸಿದ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಟಿ.ಎಸ್‌.ಶಿವಜ್ಞಾನಂ ನೇತೃತ್ವದ ವಿಭಾಗೀಯ ಪೀಠವು, ಇ.ಡಿ ಅರ್ಜಿಯನ್ನು ಪುರಸ್ಕರಿಸಿತು.

‘ಪಕ್ಷಪಾತದ ವರ್ತನೆ’: ಅರ್ಜಿ ವಿಚಾರಣೆ ವೇಳೆ, ಪಶ್ಚಿಮ ಬಂಗಾಳ ಪೊಲೀಸರ ಕಾರ್ಯವೈಖರಿಯನ್ನು ಕಟುವಾಗಿ ಟೀಕಿಸಿದ ಹೈಕೋರ್ಟ್‌ನ ವಿಭಾಗೀಯ ಪೀಠ, ‘ಈ ಪ್ರಕರಣದಲ್ಲಿ ಪೊಲೀಸರು ಸಂಪೂರ್ಣ ಪಕ್ಷಪಾತದಿಂದ ವರ್ತಿಸಿದ್ದಾರೆ’ ಎಂದು ಹೇಳಿತು.

‘ಆರೋಪಿಯನ್ನು ರಕ್ಷಿಸುವ ಸಂಬಂಧ ತನಿಖೆಯನ್ನು ವಿಳಂಬ ಮಾಡಲಾಗಿದೆ’ ಎಂದೂ ಪೀಠವು ಹೇಳಿತು.

‘ತನಿಖೆ ನಡೆಸುವುದಕ್ಕಾಗಿ ಸಿಬಿಐಗೆ ಹಸ್ತಾಂತರಿಸಲು ಯೋಗ್ಯವಾದ ಪ್ರಕರಣ ಇದಾಗಿದೆ’ ಎಂದು ಅಭಿಪ್ರಾಯಪಟ್ಟ ವಿಭಾಗೀಯ ಪೀಠ, ‘ಸಂಜೆ 4.30ರ ಒಳಗಾಗಿ ಆರೋಪಿಯನ್ನು ಸಿಬಿಐಗೆ ಒಪ್ಪಿಸಬೇಕು’ ಎಂದೂ ಆದೇಶಿಸಿತು.

ಶಹಜಹಾನ್‌ ಸ್ವತ್ತು ಜಪ್ತಿ

ಶಹಜಹಾನ್‌ ಶೇಖ್‌ ಅವರಿಗೆ ಸೇರಿದ, ಸಂದೇಶ್‌ಖಾಲಿಯಲ್ಲಿರುವ ₹12.78 ಕೋಟಿ ಮೌಲ್ಯದ ಸ್ವತ್ತುಗಳನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಮಂಗಳವಾರ ಜಪ್ತಿ ಮಾಡಿದ್ದಾರೆ.

ಬ್ಯಾಂಕ್‌ ಠೇವಣಿಗಳು, ಒಂದು ಅಪಾರ್ಟ್‌ಮೆಂಟ್‌, ಕೃಷಿ ಭೂಮಿ ಹಾಗೂ ಮೀನುಗಾರಿಕೆ ನಡೆಸುವ ಜಮೀನುಗಳು ಜಪ್ತಿ ಮಾಡಿದ ಸ್ವತ್ತುಗಳಲ್ಲಿ ಸೇರಿವೆ.

‘ಹಣ ಅಕ್ರಮ ವರ್ಗಾವಣೆ ಕಾಯ್ದೆಯಡಿ, ಶಹಜಹಾನ್‌ ಶೇಖ್‌ಗೆ ಸೇರಿದ ಸ್ವತ್ತುಗಳನ್ನು ಜಪ‍್ತಿ ಮಾಡುವುದಕ್ಕೆ ಸಂಬಂಧಿಸಿ ತಾತ್ಕಾಲಿಕ ಆದೇಶವನ್ನು ಹೊರಡಿಸಲಾಗಿದೆ’ ಎಂದು ಇ.ಡಿ ಪ್ರಕಟಣೆಯಲ್ಲಿ ತಿಳಿಸಿದೆ.

ಸತ್ಯಮೇವ ಜಯತೆ, ಕಲ್ಕತ್ತ ಹೈಕೋರ್ಟ್‌ ಆದೇಶ ಬಿಜೆಪಿಯ ನಿಲುವನ್ನು ಸಮರ್ಥಿಸಿದೆ
ಶೆಹಜಾದ್‌ ಪೂನಾವಾಲಾ, ಬಿಜೆಪಿ ವಕ್ತಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.