ADVERTISEMENT

ಎಂಒಪಿ ರಸಗೊಬ್ಬರ ಹಗರಣ: ಅಶೋಕ್‌ ಗೆಹಲೋತ್ ಸಹೋದರನಿಗೆ ಸಿಬಿಐ ಸಂಕಷ್ಟ

ಪಿಟಿಐ
Published 17 ಜೂನ್ 2022, 11:36 IST
Last Updated 17 ಜೂನ್ 2022, 11:36 IST
ಅಶೋಕ್‌ ಗೆಹಲೋತ್‌ 
ಅಶೋಕ್‌ ಗೆಹಲೋತ್‌    

ನವದೆಹಲಿ/ಜೈಪುರ: ಎಂಒಪಿ ರಸಗೊಬ್ಬರ ಹಗರಣ ಪ್ರಕರಣ ಸಂಬಂಧ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್ ಅವರ ಸಹೋದರ ಸೇರಿ 14 ಮಂದಿಯ ನಿವಾಸಗಳ ಮೇಲೆ ಸಿಬಿಐ ಶುಕ್ರವಾರ ದಾಳಿ ನಡೆಸಿ ಶೋಧ ನಡೆಸಿದೆ.

ರೈತರಿಗೆ ವಿತರಿಸಬೇಕಿದ್ದಎಂಒಪಿ (ಪೊಟ್ಯಾಸಿಯಂ ಕ್ಲೋರೈಡ್ ಅಥವಾ ಮ್ಯೂರಿಯೇಟ್ ಆಫ್ ಪೊಟ್ಯಾಶ್) ರಸಗೊಬ್ಬರವನ್ನು ಬೇರೆ ದೇಶಗಳಿಗೆ ರಫ್ತು ಮಾಡಿರುವ ಆರೋಪ ಸಂಬಂಧ ಅಶೋಕ್‌ ಗೆಹಲೋತ್‌ ಸಹೋದರ ಮತ್ತು ಕಾಂಗ್ರೆಸ್‌ ನಾಯಕ ಅಗ್ರಸೇನ್‌ ಗೆಹಲೋತ್ ಮತ್ತು ಇತರ 14 ಆರೋಪಿಗಳು ಹಾಗೂ ಇವರ ಒಡೆತನದ ಕಂಪನಿಗಳ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ. ಅಗ್ರಸೇನ್‌ ಅವರ ಜೋಧ್‌ಪುರದಮಂಡೋರ್‌ನಲ್ಲಿರುವ ನಿವಾಸ ಮತ್ತು ಇವರಿಗೆಸಂಬಂಧಿಸಿದಮೂರು ರಾಜ್ಯಗಳಲ್ಲಿನ 16 ಸ್ಥಳಗಳಲ್ಲಿ ಸಿಬಿಐ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದರು.

ಎಂಒಪಿ ರಸಗೊಬ್ಬರವನ್ನು ಸರ್ಕಾರ ಶೇ 80ರಷ್ಟು ಸಬ್ಸಿಡಿಯಲ್ಲಿ ರೈತರಿಗೆ ವಿತರಿಸುತ್ತಿದ್ದು, ಎಂಒಪಿ ಆಮದು ಮಾಡಿಕೊಳ್ಳುವಲ್ಲಿ ಭ್ರಷ್ಟಾಚಾರ ನಡೆದಿದೆ.ರೈತರಿಗೆ ವಿತರಿಸಲು ಆಮದು ಮಾಡಿಕೊಂಡ ಎಂಒಪಿಯನ್ನು ಕೈಗಾರಿಕಾ ಬಳಕೆಯ ಉಪ್ಪು (ಫ್ಲೋರ್ಸ್‌ಪಾರ್) ಆಗಿ ಮರು ಪ್ಯಾಕ್ ಮಾಡಲಾಗಿದೆ. ಆಗ್ನೇಯ ಏಷ್ಯಾದ ದೇಶಗಳು, ಸೌದಿ ಅರೇಬಿಯಾ ಮತ್ತು ಇತರ ದೇಶಗಳ ಮಾರುಕಟ್ಟೆಗಳಿಗೆ ರಫ್ತು ಮಾಡಲಾಗಿದೆ ಎಂದು ಸಿಬಿಐ ಆರೋಪಿಸಿದೆ.

ADVERTISEMENT

ಸರ್ಕಾರ ನೀಡುವ ಸಬ್ಸಿಡಿಯನ್ನು ಆರೋಪಿಗಳು ನೆಪಮಾತ್ರಕ್ಕೆ ವಹಿವಾಟಿನ ಮೂಲಕ ಪಡೆದುಕೊಳ್ಳುತ್ತಿದ್ದರು.ಈ ಪ್ರಕರಣಕ್ಕೆ ಸಂಬಂಧಿಸಿ ಹೊಸ ಸಾಕ್ಷ್ಯಗಳು ಪತ್ತೆಯಾದರೆ ಶೋಧ ಕಾರ್ಯಾಚರಣೆ ವಿಸ್ತರಿಸಲಾಗುವುದು ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

ಅಂತಿಮವಾಗಿ ಬಿಜೆಪಿಗೆ ಹಾನಿ: ಸಹೋದರನ ನಿವಾಸದ ಮೇಲೆ ಸಿಬಿಐ ದಾಳಿ ನಡೆಸಿರುವುದಕ್ಕೆರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹಲೋತ್‌ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಜೈಪುರದವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾನು ದೆಹಲಿಯಲ್ಲಿ ಸಕ್ರಿಯವಾಗಿದ್ದರೆ ಅಥವಾ ರಾಹುಲ್ ಗಾಂಧಿಗಾಗಿ ಚಳವಳಿಯಲ್ಲಿ ಭಾಗವಹಿಸಿದ್ದರೆ, ನನ್ನ ಸಹೋದರನ ಮೇಲೆ ಏಕೆ ಸೇಡು ತೀರಿಸಿಕೊಳ್ಳಬೇಕು? ಇದು ನ್ಯಾಯೋಚಿತವಲ್ಲ. ಇದರಿಂದ ನಾವುಹೆದರುವುದಿಲ್ಲ. ಆದರೆ, ಕೇಂದ್ರದ ಈ ಧೋರಣೆ ಅಂತಿಮವಾಗಿ ಬಿಜೆಪಿಗೆ ಮಾತ್ರ ಹಾನಿ ಮಾಡುತ್ತದೆ’ ಎಂದು ಕಿಡಿಕಾರಿದರು.

‘ನನ್ನ ಕುಟುಂಬದ ಯಾರೊಬ್ಬರೂ ರಾಜಕೀಯದಲ್ಲಿಲ್ಲ. ಮೊದಲು ಇ.ಡಿ ದಾಳಿ ನಡೆಯಿತು. ಈಗ ಸಿಬಿಐ ದಾಳಿ ಗ್ರಹಿಕೆಗೆ ನಿಲುಕದ್ದು. ಬಿಜೆಪಿ ಮತ್ತು ಕೇಂದ್ರ ಸರ್ಕಾರ ದೇಶದ ಜನರಿಗೆ ಕಿರುಕುಳ ನೀಡುತ್ತಿವೆ. ಇದರಿಂದಹೆಚ್ಚು ಪ್ರತಿಕೂಲ ಪರಿಣಾಮಗಳನ್ನು ಅವರೇ ಅನುಭವಿಸುತ್ತಾರೆ’ ಎಂದರು.

ಇದು ಸೇಡಿನ ರಾಜಕಾರಣ: ಸಿಬಿಐ ದಾಳಿಗೆ ಕಟುವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌, ‘ಇದು ಎಲ್ಲ ಮಿತಿಗಳನ್ನು ಮೀರಿದ ಸೇಡಿನ ರಾಜಕಾರಣ’ ಎಂದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದೆ.

‘ಇಂತಹತಂತ್ರಗಳಿಂದ ನಮ್ಮ ದನಿ ಅಡಗಿಸಲು ಸಾಧ್ಯವಿಲ್ಲ.ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಅಶೋಕ್ ಗೆಹಲೋತ್ ಮುಂಚೂಣಿಯಲ್ಲಿದ್ದರು. ಅದಕ್ಕಾಗಿ ಇದು ಮೋದಿ ಸರ್ಕಾರದ ಲಜ್ಜೆಗೆಟ್ಟ ಪ್ರತಿಕ್ರಿಯೆಯಾಗಿದೆ! ನಾವು ಮೌನ ವಹಿಸುವುದಿಲ್ಲ’ ಎಂದು ಕಾಂಗ್ರೆಸ್ ಮುಖ್ಯ ವಕ್ತಾರ ಜೈರಾಮ್ ರಮೇಶ್ ಟ್ವಿಟರ್‌ನಲ್ಲಿ ಹರಿಹಾಯ್ದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.