ADVERTISEMENT

₹232 ಕೋಟಿ ಅಕ್ರಮ ವರ್ಗಾವಣೆ: ಎಎಐ ಅಧಿಕಾರಿ ವಿರುದ್ಧ ಎಫ್‌ಐಆರ್‌

ಪಿಟಿಐ
Published 29 ಆಗಸ್ಟ್ 2025, 14:43 IST
Last Updated 29 ಆಗಸ್ಟ್ 2025, 14:43 IST
   

ನವದೆಹಲಿ: ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರಕ್ಕೆ (ಎಎಐ) ಸೇರಿದ ₹232 ಕೋಟಿ ಮೊತ್ತವನ್ನು ಅಕ್ರಮವಾಗಿ ತನ್ನ ವೈಯಕ್ತಿಕ ಖಾತೆಗೆ ವರ್ಗಾಯಿಸಿಕೊಂಡಿರುವ ಆರೋಪದಲ್ಲಿ ಪ್ರಾಧಿಕಾರದ ಹಿರಿಯ ವ್ಯವಸ್ಥಾಪಕರೊಬ್ಬರ ವಿರುದ್ಧ ಸಿಬಿಐ ಎಫ್‌ಐಆರ್‌ ದಾಖಲಿಸಿದೆ. 

ಆರೋಪಿಯನ್ನು ಪ್ರಾಧಿಕಾರದ ಹಣಕಾಸು ವ್ಯವಹಾರಗಳ ವ್ಯವಸ್ಥಾಪಕ ಅಧಿಕಾರಿ ರಾಹುಲ್‌ ವಿಜಯ್‌ ಎಂದು ಗುರುತಿಸಲಾಗಿದೆ. ಆಂತರಿಕ ಲೆಕ್ಕ ಪರಿಶೋಧನೆ ವೇಳೆ ವಿಜಯ್‌ ಅವರು ನಡೆಸಿರುವ ಈ ಅಕ್ರಮಗಳ ಬಗ್ಗೆ ತಿಳಿದುಬಂದಿದೆ.

2019–20ರಿಂದ 2022–23ರ ಅವಧಿಯಲ್ಲಿ ಅಸ್ತಿತ್ವದಲ್ಲೇ ಇರದ ಆಸ್ತಿಗಳ ಖರೀದಿ–ಹೂಡಿಕೆಗೆ ಸಂಬಂಧಿಸಿದಂತೆ ಸುಳ್ಳು ಲೆಕ್ಕಪತ್ರಗಳನ್ನು ಸೃಷ್ಟಿಸಿ, ವಿವಿಧ ಯೂಸರ್‌ ಐಡಿಗಳ ಮೂಲಕ ಹಣ ಪಾವತಿಯ ಸುಳ್ಳು ದಾಖಲೆಗಳನ್ನು ರೂಪಿಸಿ, ವಿಜಯ್‌ ತಮ್ಮ ಖಾತೆಗೆ ಹಣವನ್ನು ವರ್ಗಾಯಿಸಿಕೊಂಡಿದ್ದಾರೆ.

ADVERTISEMENT

ಈ ವಿಚಾರ ತಿಳಿಯುತ್ತಿದ್ದಂತೆಯೇ ಪ್ರಾಧಿಕಾರದ ಹಿರಿಯ ಅಧಿಕಾರಿ ಚಂದ್ರಕಾಂತ್‌.‍ಪಿ ಅವರು ಸಿಬಿಐಗೆ ದೂರು ನೀಡಿದ್ದಾರೆ. ದೂರನ್ನು ಆಧರಿಸಿ ಪ್ರಕರಣ ದಾಖಲಿಸಿರುವುದಾಗಿ ಸಿಬಿಐ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.