ADVERTISEMENT

ನನ್ನ ವಿರುದ್ಧದ ಸಿಬಿಐ ತನಿಖೆ ಸಂಪೂರ್ಣ ಕಾನೂನುಬಾಹಿರ: ಅನಿಲ್ ದೇಶಮುಖ್

ಪಿಟಿಐ
Published 2 ಜುಲೈ 2021, 13:03 IST
Last Updated 2 ಜುಲೈ 2021, 13:03 IST
ಮಹಾರಾಷ್ಟ್ರದ ಮಾಜಿ ಸಚಿವ ಅನಿಲ್ ದೇಶಮುಖ್
ಮಹಾರಾಷ್ಟ್ರದ ಮಾಜಿ ಸಚಿವ ಅನಿಲ್ ದೇಶಮುಖ್   

ಮುಂಬೈ: ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ನನ್ನ ವಿರುದ್ಧ ಸಿಬಿಐ ನಡೆಸುತ್ತಿರುವ ವಿಚಾರಣೆಯು ಕಾನೂನುಬಾಹಿರ ಮತ್ತು ಕಾನೂನು ಪ್ರಕ್ರಿಯೆಗಳನ್ನು ಉಲ್ಲಂಘಿಸಲಾಗಿದೆ. 26/11ರ ಭಯೋತ್ಪಾದಕ ಅಜ್ಮಲ್ ಕಸಬ್ ಕೂಡ ಕಾನೂನು ನಿಯಮದ ಲಾಭ ಪಡೆದಿದ್ದ ಎಂದು ಮಹಾರಾಷ್ಟ್ರದ ಮಾಜಿ ಸಚಿವ ಅನಿಲ್ ದೇಶಮುಖ್ ಶುಕ್ರವಾರ ಬಾಂಬೆ ಹೈಕೋರ್ಟ್‌ಗೆ ತಿಳಿಸಿದ್ದಾರೆ.

ಏಪ್ರಿಲ್‌ನಲ್ಲಿ ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಸಿಬಿಐ ವಿಚಾರಣೆಯನ್ನು ಪ್ರಾರಂಭಿಸಿದೆಯಾದರೂ, ಎನ್‌ಸಿಪಿ ನಾಯಕನನ್ನು ವಿಚಾರಣೆಗೆ ಒಳಪಡಿಸಲು ಮಹಾರಾಷ್ಟ್ರ ಸರ್ಕಾರದಿಂದ ಪೂರ್ವಾನುಮತಿ ಪಡೆಯಲಿಲ್ಲ. ಈ ಅನುಮತಿಯಿಲ್ಲದೆಯೇ ದೇಶಮುಖ್ ವಿರುದ್ಧ ದಾಖಲಾದ ಭ್ರಷ್ಟಾಚಾರ ಮತ್ತು ದುಷ್ಕೃತ್ಯದ ಆರೋಪದ ಮೇಲಿನ ವಿಚಾರಣೆಯು ಕಾನೂನುಬಾಹಿರವಾಗಿದೆ. ನೀವು ಕಾನೂನಿನ ಅಗತ್ಯತೆಗಳನ್ನು ಕಡೆಗಣಿಸಬಹುದೇ? ಅನುಮೋದನೆಗಾಗಿ ರಾಜ್ಯವನ್ನು ಸಂಪರ್ಕಿಸಬಹುದಿತ್ತು. ಹೀಗಾಗಿಯೇ ಈ ಸಂಪೂರ್ಣ ವಿಚಾರಣೆ ಕಾನೂನು ಬಾಹಿರವಾಗಿದೆ ಎಂದು ದೇಶಮುಖ್ ಪರ ಹಿರಿಯ ವಕೀಲ ಅಮಿತ್ ದೇಸಾಯಿ ಹೈಕೋರ್ಟ್‌ಗೆ ತಿಳಿಸಿದರು.

'ಭಾವನೆಗಳಿಂದ ನಮ್ಮನ್ನು ದೂರಮಾಡಬಹುದು ಆದರೆ ಕಾರ್ಯವಿಧಾನ ಮತ್ತು ಕಾನೂನಿನ ನಿಯಮಗಳನ್ನು ನಾವು ಕಡೆಗಣಿಸಲು ಸಾಧ್ಯವಿಲ್ಲ. ಕಸಬ್‌ನಂತಹ ವ್ಯಕ್ತಿಗೂ ಈ ದೇಶದಲ್ಲಿ ಕಾನೂನಿನ ನಿಯಮಗಳ ಲಾಭ ಸಿಕ್ಕಿದೆ. ಈ ದೇಶದ ಪ್ರತಿಯೊಬ್ಬರೂ ಕಾನೂನಿನ ಪ್ರಕ್ರಿಯೆಯ ಲಾಭ ಪಡೆಯುತ್ತಾರೆ' ಎಂದು ಹೇಳಿದರು.

ADVERTISEMENT

ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್ ವಿರುದ್ಧದ ಭ್ರಷ್ಟಾಚಾರದ ಆರೋಪದ ನಂತರ ತನ್ನ ವಿರುದ್ಧ ಸಿಬಿಐ ದಾಖಲಿಸಿರುವ ಎಫ್ಐಆರ್ ಅನ್ನು ಪ್ರಶ್ನಿಸಿ ದೇಶಮುಖ್ ಸಲ್ಲಿಸಿದ್ದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್.ಎಸ್.ಶಿಂಧೆ ಮತ್ತು ಎನ್.ಎಂ.ಜಮದಾರ್ ಅವರ ನ್ಯಾಯಪೀಠದ ಮುಂದೆ ದೇಸಾಯಿ ವಾದಿಸುತ್ತಿದ್ದರು. ಈ ವರ್ಷದ ಏಪ್ರಿಲ್‌ನಲ್ಲಿ ಬಾಂಬೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಾಂಕರ್ ದತ್ತಾ ನೇತೃತ್ವದ ನ್ಯಾಯಪೀಠವು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ದೇಶಮುಖ್ ವಿರುದ್ಧ ಪ್ರಾಥಮಿಕ ತನಿಖೆ ನಡೆಸುವಂತೆ ಸಿಬಿಐಗೆ ನಿರ್ದೇಶಿಸಿತ್ತು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.