ADVERTISEMENT

ಜಮ್ಮು–ಕಾಶ್ಮೀರ, ದೆಹಲಿಯಲ್ಲಿ ಸಿಬಿಐ ದಾಳಿ

ಅಕ್ರಮವಾಗಿ ಬಂದೂಕು ಪರವಾನಗಿ ನೀಡಿದ ಪ್ರಕರಣ

​ಪ್ರಜಾವಾಣಿ ವಾರ್ತೆ
Published 24 ಜುಲೈ 2021, 16:03 IST
Last Updated 24 ಜುಲೈ 2021, 16:03 IST
   

ಶ್ರೀನಗರ: ಅಕ್ರಮವಾಗಿ ಬಂದೂಕು ಪರವಾನಗಿ ನೀಡಿದ ಹಗರಣಕ್ಕೆ ಸಂಬಂಧಿಸಿದಂತೆ ಶನಿವಾರ ದಾಳಿ ನಡೆಸಿರುವ ಸಿಬಿಐ, ಶ್ರೀನಗರದಲ್ಲಿರುವ ಹಿರಿಯ ಐಎಎಸ್‌ ಅಧಿಕಾರಿ ಶಾಹಿದ್‌ ಚೌಧರಿ ನಿವಾಸ ಸೇರಿದಂತೆ ಜಮ್ಮು ಮತ್ತು ಕಾಶ್ಮೀರ ಹಾಗೂ ದೆಹಲಿಯ ವಿವಿಧೆಡೆ ಶೋಧ ನಡೆಸಿದೆ.

ಶ್ರೀನಗರ, ಅನಂತನಾಗ್‌, ಬಾರಾಮುಲ್ಲಾ, ಜಮ್ಮು, ಉಧಂಪುರ, ರಾಜೌರಿ ಹಾಗೂ ದೆಹಲಿಯ ಹಲವು ಸ್ಥಳಗಳು ಸೇರಿದಂತೆ 40 ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆದಿದೆ.

ಈ ವೇಳೆ ಐಎಎಸ್‌ ಅಧಿಕಾರಿ ಚೌಧರಿ ನಿವಾಸ, 20 ಗನ್‌ಹೌಸ್‌ಗಳು ಸೇರಿದಂತೆ ಸರ್ಕಾರಿ ಅಧಿಕಾರಿಗಳು ಹಾಗೂ ನಿವೃತ್ತ ಅಧಿಕಾರಿಗಳ ಕಚೇರಿ ಹಾಗೂ ಮನೆಗಳಲ್ಲಿ ಶೋಧ ನಡೆಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

ಚೌಧರಿ ಅವರು ಪ್ರಸ್ತುತ ಜಮ್ಮು ಮತ್ತು ಕಾಶ್ಮೀರದ ಬುಡಕಟ್ಟು ವ್ಯವ ಹಾರಗಳ ಕಾರ್ಯದರ್ಶಿ ಮತ್ತು ಯುವ ಜನ ಯೋಜನೆ ಸಿಇಒ ಆಗಿದ್ದಾರೆ. ಅವರು ಕಥುವಾ, ರಿಯಾಸಿ, ರಜೌರಿ ಮತ್ತು ಉಧಂಪುರ ಜಿಲ್ಲೆಗಳಲ್ಲಿ ಜಿಲ್ಲಾಧಿ ಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ಆ ವೇಳೆ ಅವರು ಸಾವಿರಾರು ಬಂದೂಕು ಗಳಿಗೆಅಕ್ರಮವಾಗಿ ಪರವಾನಗಿ ನೀಡಿದ್ದರು ಎಂದು ಆರೋಪಿಸಲಾಗಿದೆ.

ಇದೇ ರೀತಿಯಲ್ಲಿ, 2019ರ ಡಿಸೆಂಬರ್‌ನಲ್ಲಿ ಶ್ರೀನಗರ, ಜಮ್ಮು, ಗುರುಗ್ರಾಮ (ಹರಿಯಾಣ), ಮೊಹಾಲಿ (ಪಂಜಾಬ್‌) ಮತ್ತು ನೋಯ್ಡಾ (ಉತ್ತರ ಪ್ರದೇಶ)ದ 17 ಸ್ಥಳಗಳಲ್ಲಿ ಸಿಬಿಐ ದಾಳಿ ನಡೆಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿ ನಿವೃತ್ತ ಜಿಲ್ಲಾಧಿಕಾರಿಗಳ/ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳ ನಿವಾಸದಲ್ಲಿ ಶೋಧ ನಡೆಸಲಾಗಿತ್ತು.

ನಿವೃತ್ತ ಐಎಎಸ್‌ ಅಧಿಕಾರಿ ರಾಜೀವ್‌ ರಂಜನ್‌, ಕುಪ್ವಾರಾ ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಇತ್ರಿತ್‌ ಹುಸೇನ್‌ ರಫೀಕ್‌ ಅವರೊಂದಿಗೆ ಸೇರಿ ನಕಲಿ ದಾಖಲೆಗಳ ಆಧಾರದಲ್ಲಿ ಸಾಕಷ್ಟು ಬಂದೂಕುಗಳಿಗೆ ಪರವಾನಗಿ ನೀಡಿದ್ದಾರೆ ಎಂಬ ಆರೋಪದಲ್ಲಿ, 2020ರ ಮಾರ್ಚ್‌ನಲ್ಲಿ ಅವರಿಬ್ಬರನ್ನೂ ಸಿಬಿಐ ಬಂಧಿಸಿತ್ತು.

ಹಗರಣ ಸಂಬಂಧ ರಾಜಸ್ಥಾನದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್‌) ತನಿಖೆ ನಡೆಸಿದ ಸಂದರ್ಭದಲ್ಲಿ, ಸಾರ್ವಜನಿಕ ಅಧಿಕಾರಿಗಳು ಮತ್ತು ಹಿರಿಯ ಐಎಎಸ್‌ ಅಧಿಕಾರಿಗಳ ಹೆಸರು ಕೇಳಿ ಬಂದಿತ್ತು. ಆ ನಂತರದಲ್ಲಿ ಜಮ್ಮು ಮತ್ತು ಕಾಶ್ಮೀರ ಸರ್ಕಾರವು 2018ರಲ್ಲಿ ಸಿಬಿಐ ತನಿಖೆಗೆ ಶಿಫಾರಸು ಮಾಡಿತ್ತು.

ಜಮ್ಮು ಮತ್ತು ಕಾಶ್ಮೀರದ ವಿವಿಧ ಜಿಲ್ಲೆಗಳಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಬಂದೂಕು ಪರವಾನಗಿ ನೀಡುವಲ್ಲಿ ಅಕ್ರಮ ನಡೆದಿದೆ ಎನ್ನಲಾಗಿದ್ದು, ಈ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.