ADVERTISEMENT

ಸಮೀರ್ ವಿರುದ್ಧ ಲಂಚ ಆರೋಪ: ಮಧ್ಯಂತರ ರಕ್ಷಣೆ ಆದೇಶ ಹಿಂಪಡೆಯಲು ಸಿಬಿಐ ಮನವಿ

ಪಿಟಿಐ
Published 7 ಜೂನ್ 2023, 11:45 IST
Last Updated 7 ಜೂನ್ 2023, 11:45 IST
ಸಮೀರ್ ವಾಂಖೆಡೆ
ಸಮೀರ್ ವಾಂಖೆಡೆ   

ಮುಂಬೈ (ಪಿಟಿಐ): ಮಾದಕವಸ್ತು ನಿಯಂತ್ರಣ ದಳದ (ಎನ್‌ಸಿಬಿ) ಮುಂಬೈ ವಲಯದ ಮಾಜಿ ಮುಖ್ಯಸ್ಥ ಸಮೀರ್‌ ವಾಂಖೆಡೆಗೆ ಬಂಧನದಿಂದ ರಕ್ಷಣೆ ನೀಡುವ ಹಿಂದಿನ ಆದೇಶವನ್ನು ಹಿಂತೆಗೆದುಕೊಳ್ಳುವಂತೆ ಬಾಂಬ್‌ ಹೈಕೋರ್ಟ್‌ಗೆ ಸಿಬಿಐ ಮನವಿ ಮಾಡಿದೆ. 

ಐಷಾರಾಮಿ ಹಡಗಿನಿಂದ ಮಾದಕವಸ್ತುಗಳನ್ನು ವಶಪಡಿಸಿಕೊಂಡ ನಂತರ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಬಂಧನಕ್ಕೆ ಸಂಬಂಧಿಸಿದಂತೆ ಸಮೀರ್‌ ವಿರುದ್ಧ ಸುಲಿಗೆ ಮತ್ತು ಲಂಚದ ಆರೋಪ ಪ್ರಕರಣ ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ತನಿಖಾ ಸಂಸ್ಥೆ ಹೇಳಿದೆ.

ಡ್ರಗ್ಸ್‌ ತೆಗೆದುಕೊಂಡ ಪ್ರಕರಣದಿಂದ ಆರ್ಯನ್‌ ಖಾನ್‌ ಅವರನ್ನು ರಕ್ಷಿಸಲು ₹ 25 ಕೋಟಿ ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಸಿಬಿಐ ಕಳೆದ ತಿಂಗಳು ವಾಂಖೆಡೆ ಮತ್ತು ಇತರ ನಾಲ್ವರ ವಿರುದ್ಧ ಎಫ್ಐಆರ್ ದಾಖಲಿಸಿತ್ತು. ಎಫ್ಐಆರ್ ರದ್ದುಗೊಳಿಸುವಂತೆ ಮತ್ತು ಬಂಧನದಂಥ ಒತ್ತಾಯದ ಕ್ರಮಗಳನ್ನು ತೆಗೆದುಕೊಳ್ಳದಂತೆ ಮಧ್ಯಂತರ ರಕ್ಷಣೆ ಕೋರಿ ವಾಂಖೆಡೆ ಹೈಕೋರ್ಟ್ ಮೊರೆ ಹೋಗಿದ್ದರು.

ADVERTISEMENT

ಹೈಕೋರ್ಟ್‌ ರಜಾಕಾಲದ ಪೀಠ ಕಳೆದ ತಿಂಗಳು ವಾಂಖೆಡೆಗೆ ಮಧ್ಯಂತರ ಪರಿಹಾರ ನೀಡಿ, ತನಿಖೆಗೆ ಸಹಕರಿಸುವಂತೆ ನಿರ್ದೇಶನ ನೀಡಿತ್ತು.

ವಾಂಖೆಡೆ ಅವರ ಅರ್ಜಿಗೆ ಪ್ರತಿಕ್ರಿಯೆಯಾಗಿ ಸಿಬಿಐ ಜೂನ್ 2 ರಂದು ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿ,  ‘ಮಧ್ಯಂತರ ಪರಿಹಾರ ನೀಡಿರುವುದರಿಂದ ತನಿಖೆ ಮೇಲೆ ಪ್ರತಿಕೂಲ ಪ‌ರಿಣಾಮ ಬೀರುತ್ತದೆ. ಆದ್ದರಿಂದ ಮಧ್ಯಂತರ ಆದೇಶ ಹಿಂತೆಗೆದುಕೊಳ್ಳಬೇಕು’ ಎಂದು ಮನವಿ ಮಾಡಿತ್ತು.

ಪ್ರಕರಣದ ತನಿಖೆ ಆರಂಭಿಕ ಹಂತದಲ್ಲಿದ್ದು, ನಿಷ್ಪಕ್ಷಪಾತ ಮತ್ತು ವೃತ್ತಿಪರ ರೀತಿಯಲ್ಲಿ ನಡೆಸಲಾಗುತ್ತಿದೆ ಎಂದು ಸಿಬಿಐ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.