ADVERTISEMENT

ವಾಜೆ ವಿಚಾರಣೆಗೆ ಕೋರ್ಟ್‌ ಅನುಮತಿ ಕೋರಿದ ಸಿಬಿಐ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2021, 11:34 IST
Last Updated 7 ಏಪ್ರಿಲ್ 2021, 11:34 IST
ಸಚಿನ್‌ ವಾಜೆ
ಸಚಿನ್‌ ವಾಜೆ   

ಮುಂಬೈ (ಪಿಟಿಐ): ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್‌ ವಿರುದ್ಧದ ಭ್ರಷ್ಟಾಚಾರ ಆರೋಪ ಪ್ರಕರಣದ ಪ್ರಾಥಮಿಕ ತನಿಖೆಗೆ ಸಂಬಂಧಿಸಿದಂತೆ, ಅಮಾನತುಗೊಂಡಿರುವ ಪೊಲೀಸ್ ಅಧಿಕಾರಿ ಸಚಿನ್ ವಾಜೆಯವರನ್ನು ವಿಚಾರಣೆಗೆ ಒಳಪಡಿಸಲು ಅನುಮತಿ ನೀಡುವಂತೆ ಬುಧವಾರ ರಾ‌ಷ್ಟ್ರೀಯ ತನಿಖಾ ದಳದ (ಎನ್‌ಐಎ) ವಿಶೇಷ ನ್ಯಾಯಾಲಯವನ್ನು ಕೋರಿದೆ.

ಫೆಬ್ರುವರಿ 25ರಂದು ಉದ್ಯಮಿ ಮುಖೇಶ್ ಅಂಬಾನಿ ಅವರ ದಕ್ಷಿಣ ಮುಂಬೈ ನಿವಾಸದ ಬಳಿ ಸ್ಫೋಟಕ ತುಂಬಿದ ಎಸ್‌ಯುವಿ ಪತ್ತೆ ಪ್ರಕರಣ ಮತ್ತು ನಂತರ ಉದ್ಯಮಿ ಹಿರೆನ್ ಮನ್‌ಸುಖ್ ಹತ್ಯೆ ಪ್ರಕರಣದಲ್ಲಿ ಮಾರ್ಚ್‌ 13ರಂದು ಸಚಿನ್ ವಾಜೆ ಅವರನ್ನು ಬಂಧಿಸಲಾಗಿದೆ. ಸದ್ಯ ವಾಜೆ ಎನ್‌ಐಎ ವಶದಲ್ಲಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ.

ವಾಜೆ ಅವರನ್ನುವಿಚಾರಣೆಗೆ ಒಳಪಡಿಸಲು ಅನುಮತಿ ನೀಡುವಂತೆ ಕೋರಿ ಸಿಬಿಐ ಬುಧವಾರ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ. ಆರೋಪಿಯನ್ನು ಎನ್‌ಐಎ ಹಾಜರುಪಡಿಸುವಾಗ ನ್ಯಾಯಾಲಯ ಈ ಅರ್ಜಿಯ ವಿಚಾರಣೆ ನಡೆಸಲಿದೆ.

ADVERTISEMENT

ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್‌ ವಿರುದ್ಧ ಮುಂಬೈನ ಮಾಜಿ ಪೊಲೀಸ್ ಮುಖ್ಯಸ್ಥ ಪರಮ್ ವೀರ್‌ ಸಿಂಗ್ ಮಾಡಿರುವ ಭ್ರಷ್ಟಾಚಾರ ಮತ್ತು ದುರ್ನಡತೆಯ ಆರೋಪಕ್ಕೆ ಸಂಬಂಧಿಸಿದಂತೆ 15 ದಿನಗಳಲ್ಲಿ ಪ್ರಾಥಮಿಕ ತನಿಖೆ ಪೂರ್ಣಗೊಳಿಸುವಂತೆ ಬಾಂಬೆ ಹೈಕೋರ್ಟ್ ಕೇಂದ್ರೀಯ ತನಿಖಾ ದಳಕ್ಕೆ(ಸಿಬಿಐ) ನಿರ್ದೇಶನ ನೀಡಿದ್ದು, ಸಿಬಿಐ ಮಂಗಳವಾರ ರಾತ್ರಿ ಪ್ರಾಥಮಿಕ ತನಿಖೆ ಆರಂಭಿಸಿದೆ. ಕೋರ್ಟ್‌ ಆದೇಶದ ನಂತರ ದೇಶಮುಖ್‌ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಮತ್ತು ದೇಶಮುಖ್‌ ಸುಪ್ರೀಂಕೋರ್ಟ್‌ ಕದ ತಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.