ADVERTISEMENT

ಸಿಬಿಎಸ್‌ಇ 10, 12ನೇ ತರಗತಿ ಫಲಿತಾಂಶ: 2ನೇ ಸ್ಥಾನದಲ್ಲಿ ಬೆಂಗಳೂರು ವಲಯ

​ಪ್ರಜಾವಾಣಿ ವಾರ್ತೆ
Published 22 ಜುಲೈ 2022, 17:22 IST
Last Updated 22 ಜುಲೈ 2022, 17:22 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) 10 ಮತ್ತು 12ನೇ ತರಗತಿಯ ಫಲಿತಾಂಶವನ್ನು ಶುಕ್ರವಾರ ಪ್ರಕಟಿಸಿದೆ. 10ನೇ ತರಗತಿಯ ಶೇ 94.40 ಹಾಗೂ 12ನೇ ತರಗತಿಯ ಶೇ 92.71ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ಈ ಎರಡೂ ಪರೀಕ್ಷೆಗಳ ಫಲಿತಾಂಶದಲ್ಲಿ ಬೆಂಗಳೂರು ವಲಯ ಉತ್ತಮ ಸಾಧನೆ ಮಾಡಿದ್ದು, ವಲಯವಾರು ಫಲಿತಾಂಶ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದೆ. ಸಿಬಿಎಸ್‌ಇ ಇದೇ ಮೊದಲ ಬಾರಿಗೆ ಎರಡೂ ಪರೀಕ್ಷೆಗಳ ಫಲಿತಾಂಶವನ್ನು ಒಂದೇ ದಿನ ಪ್ರಕಟಿಸಿದೆ.

ಈ ವರ್ಷ 12ನೇ ತರಗತಿಯ ಫಲಿತಾಂಶ ಕಳೆದ ವರ್ಷಕ್ಕಿಂತ ಶೇ 6.66 ಹಾಗೂ 10ನೇ ತರಗತಿ ಫಲಿತಾಂಶದಲ್ಲಿ ಶೇ 4.64ರಷ್ಟು ಕುಸಿತವಾಗಿದೆ. 2021ರಲ್ಲಿ 12ನೇ ತರಗತಿಯಲ್ಲಿ ಶೇ 99.37ರಷ್ಟು ಹಾಗೂ 10ನೇ ತರಗತಿಯಲ್ಲಿ ಶೇ 99.04ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಕಳೆದ ವರ್ಷ ಕೋವಿಡ್‌ ಸಾಂಕ್ರಾಮಿಕದ ಕಾರಣ ಪರೀಕ್ಷೆ ನಡೆಸದೆ, ವಿಶೇಷ ಮೌಲ್ಯಮಾಪನ ವಿಧಾನ ಅನುಸರಿಸಿ ಫಲಿತಾಂಶ ಪ್ರಕಟಿಸಿತ್ತು. ಈ ವರ್ಷ ಎರಡು ಹಂತಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು.

ADVERTISEMENT

12ನೇ ತರಗತಿಯ ಒಟ್ಟಾರೆ ವಿದ್ಯಾರ್ಥಿಗಳ ಪೈಕಿ 33,432 (ಶೇ 2.33) ವಿದ್ಯಾರ್ಥಿಗಳು ಶೇ 95ಕ್ಕಿಂತ ಹೆಚ್ಚು ಹಾಗೂ 1,37,797 (ಶೇ 9.39) ವಿದ್ಯಾರ್ಥಿಗಳು ಶೇ 90ಕ್ಕಿಂತ ಅಧಿಕ ಅಂಕ ಪಡೆದಿದ್ದಾರೆ. 10ನೇ ತರಗತಿಯಲ್ಲಿ ಶೇ 95ಕ್ಕಿಂತ ಹೆಚ್ಚು ಅಂಕಗಳನ್ನು 64,908 (ಶೇ 3.10) ಹಾಗೂ ಶೇ 90ಕ್ಕಿಂತ ಹೆಚ್ಚು ಅಂಕಗಳನ್ನು 2,36,993 (ಶೇ 11.32) ವಿದ್ಯಾರ್ಥಿಗಳು ಪಡೆದಿದ್ದಾರೆ.

ವಲಯವಾರು ಫಲಿತಾಂಶ: 12ನೇ ತರಗತಿಯಲ್ಲಿ ತಿರುವನಂತಪುರ ವಲಯವು ಶೇ 98.83ರಷ್ಟು ಫಲಿತಾಂಶ ಪಡೆದು ಮೊದಲ ಸ್ಥಾನದಲ್ಲಿದ್ದರೆ, ಬೆಂಗಳೂರು ವಲಯವು ಶೇ 98.16ರಷ್ಟು ಫಲಿತಾಂಶ ಪಡೆದು ಎರಡನೇ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿ ಚೆನ್ನೈ ವಲಯವಿದೆ (ಶೇ 98.97). ಅಂತೆಯೇ 10ನೇ ತರಗತಿಯಲ್ಲೂ ತಿರುವನಂತಪುರ ವಲಯ (ಶೇ 99.68), ಬೆಂಗಳೂರು ವಲಯ (ಶೇ 99.22) ಹಾಗೂ ಚೆನ್ನೈ ವಲಯ (ಶೇ 98.97) ಕ್ರಮವಾಗಿ ಮೊದಲ ಮೂರು ಸ್ಥಾನಗಳಲ್ಲಿವೆ.

ಜೆಎನ್‌ವಿ ಉತ್ತಮ ಸಾಧನೆ: 12ನೇ ತರಗತಿಯಲ್ಲಿ ಜವಾಹರ ನವೋದಯ ವಿದ್ಯಾಲಯಗಳು (ಜೆಎನ್‌ವಿ) ಉತ್ತಮ ಸಾಧನೆ ಮಾಡಿದ್ದು ಶೇ 98.93ರಷ್ಟು ಫಲಿತಾಂಶ ಪಡೆದಿವೆ. ಕೇಂದ್ರೀಯ ಟಿಬೆಟಿಯನ್‌ ಸ್ಕೂಲ್‌ ಅಡ್ಮಿನಿಸ್ಟ್ರೇಷನ್‌ (ಸಿಟಿಎಸ್‌ಎ) ಶೇ 97.96, ಕೇಂದ್ರೀಯ ವಿದ್ಯಾಲಯಗಳು ಶೇ 97.04, ಅನುದಾನಿತ ಶಾಲೆಗಳು ಶೇ 94.81,ಸರ್ಕಾರಿ ಶಾಲೆಗಳು ಶೇ 93.38 ಹಾಗೂ ಖಾಸಗಿ ಶಾಲೆಗಳು ಶೇ 92.20ರಷ್ಟು ಫಲಿತಾಂಶ ಪಡೆದಿವೆ.

10ನೇ ತರಗತಿಯಲ್ಲಿ ಜವಾಹರ ನವೋದಯ ವಿದ್ಯಾಲಯಗಳು (ಜೆಎನ್‌ವಿ) ಶೇ 99.71, ಖಾಸಗಿ ಶಾಲೆಗಳು ಶೇ 96.86, ಕೇಂದ್ರೀಯ ವಿದ್ಯಾಲಯಗಳು ಶೇ 96.61, ಕೇಂದ್ರೀಯ ಟಿಬೆಟಿಯನ್‌ ಸ್ಕೂಲ್‌ ಅಡ್ಮಿನಿಸ್ಟ್ರೇಷನ್‌ (ಸಿಟಿಎಸ್‌ಎ) ಶೇ 91.27, ಸರ್ಕಾರಿ, ಅನುದಾನಿತ ಶಾಲೆಗಳು ಕ್ರಮವಾಗಿ ಶೇ 80.68 ಮತ್ತು ಶೇ 76.73ರಷ್ಟು ಫಲಿತಾಂಶ ಗಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.