ADVERTISEMENT

ಸಿಬಿಎಸ್‌ಇ ಮಾನ್ಯತೆ: ಮಾ.1 ರಿಂದ ಪರಿಷ್ಕೃತ ‌ಡಿಜಿಟಲ್ ವ್ಯವಸ್ಥೆ

ಪಿಟಿಐ
Published 24 ಜನವರಿ 2021, 12:06 IST
Last Updated 24 ಜನವರಿ 2021, 12:06 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಸಂಪೂರ್ಣವಾಗಿ ಡಿಜಿಟಲೀಕರಿಸುವ ನಿಟ್ಟಿನಲ್ಲಿ ಮುಂದಾಗಿರುವ ಸಿಬಿಎಸ್‌ಇ, ಶಿಕ್ಷಣ ಸಂಸ್ಥೆಗಳ ಮಾನ್ಯತೆ ಪ್ರಕ್ರಿಯೆಯನ್ನು ಪರಿಷ್ಕರಿಸುತ್ತಿದೆ.

ಮಾನವ ಕನಿಷ್ಠ ಹಸ್ತಕ್ಷೇಪದೊಂದಿಗೆ ದತ್ತಾಂಶ ವಿಶ್ಲೇಷಣೆ ಮೂಲಕ ಮಾನ್ಯತೆ ನೀಡುವ ಪ್ರಕ್ರಿಯೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೊಸ ವ್ಯವಸ್ಥೆಯು ಮಾರ್ಚ್‌ 1ರಿಂದ ಜಾರಿಗೆ ಬರಲಿದೆ. ವ್ಯವಸ್ಥಿತ ಸುಧಾರಣೆಗೆ ಪೂರಕವಾಗಿ ರಾಷ್ಟ್ರೀಯ ಶಿಕ್ಷಣ ನೀತಿಯಡಿ (ಎನ್ಇಪಿ) ನೀಡಲಾದ ಹಲವು ಶಿಫಾರಸುಗಳ ಅನುಸಾರ ಈ ಪರಿಷ್ಕರಣೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ADVERTISEMENT

ಸಿಬಿಎಸ್‌ಇ ಮಾನ್ಯತೆ ಪಡೆಯಲು ಆನ್‌ಲೈನ್‌ ವ್ಯವಸ್ಥೆ 2006ರಿಂದಲೇ ಜಾರಿಯಲ್ಲಿದೆ. ನವೀಕೃತ ವ್ಯವಸ್ಥೆಯು ಪೂರ್ಣವಾಗಿ ಡಿಜಿಟಲೀಕರಣಗೊಂಡಿದ್ದಾಗಿರುತ್ತದೆ. ದತ್ತಾಂಶಗಳ ವಿಶ್ಲೇಷಣೆಯನ್ನು ಆಧರಿಸಿ ಮಾನ್ಯತೆ ಪ್ರಕ್ರಿಯೆ ನಡೆಯಲಿದೆ ಎಂದು ಸಿಬಿಎಸ್ಇ ಕಾರ್ಯದರ್ಶಿ ಅನುರಾಗ್ ತ್ರಿಪಾಠಿ ಅವರು ತಿಳಿಸಿದರು.

ನವೀಕೃತ ನೀತಿ ಕುರಿತಂತೆ ಮಂಡಳಿಯು ಶೀಘ್ರದಲ್ಲಿ ವಿವರವಾದ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಲಿದೆ. ಪರಿಷ್ಕೃತ ವೇಳಾಪಟ್ಟಿ ಅನುಸಾರ, ಪ್ರತಿ ವರ್ಷ ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸುವ ವಿಂಡೋ ಮಾರ್ಚ್ 1ರಿಂದ 31, ಜೂನ್‌ 1ರಿಂದ 30 ಮತ್ತು ಸೆ. 1ರಿಂದ 30ರವರೆಗೂ ಕಾರ್ಯನಿರ್ವಹಿಸಲಿದೆ.

ಮಾನ್ಯತೆ ವಿಸ್ತರಣೆಯ ಅರ್ಜಿಗಳನ್ನು ಪ್ರತಿ ವರ್ಷ ಮಾರ್ಚ್ 1 ರಿಂದ 31ರವರೆಗೂ ಸ್ವೀಕರಿಸಲಾಗುತ್ತದೆ. ಹೆಚ್ಚುವರಿ ವಿಷಯಗಳು, ತರಗತಿಗಳ ಸೇರ್ಪಡೆ, ಶಾಲೆಯ ಹೆಸರು ಬದಲಾವಣೆ, ಸೊಸೈಟಿ ಹೆಸರು ಬದಲಾವಣೆ ಕುರಿತ ಅರ್ಜಿಗಳನ್ನು ವರ್ಷಪೂರ್ತಿ ತೆಗೆದುಕೊಳ್ಳಲಾಗುತ್ತದೆ ಎಂದು ತ್ರಿಪಾಠಿ ತಿಳಿಸಿದರು.

ದೇಶ–ವಿದೇಶಗಳಲ್ಲಿ ಒಟ್ಟಾರೆ 24,930 ಶಾಲೆಗಳು ಸಿಬಿಎಸ್‌ಇ ಮಾನ್ಯತೆ ಪಡೆದಿವೆ. ಈ ಶಾಲೆಗಳಲ್ಲಿ ಸುಮಾರು 2 ಕೋಟಿ ವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಿದ್ದು, 10 ಲಕ್ಷಕ್ಕೂ ಹೆಚ್ಚು ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.