ನವದೆಹಲಿ: ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆಯಲ್ಲಿ 20,278 ವಿದ್ಯಾರ್ಥಿಗಳು ಕೃತಕ ಬುದ್ಧಿಮತ್ತೆ (ಎ.ಐ) ವಿಷಯದಲ್ಲಿ ಶೇ 100ರಷ್ಟು ಅಂಕಗಳಿಸಿದ್ದಾರೆ. ಹಾಗೆಯೇ, 12ನೇ ತರಗತಿಯಲ್ಲಿ ಚಿತ್ರಕಲೆ ವಿಷಯದಲ್ಲಿ ಅಧಿಕ ಮಕ್ಕಳು ಶೇ 100ರಷ್ಟು ಅಂಕಗಳಿಸಿದ್ದಾರೆ.
ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯು (ಸಿಬಿಎಸ್‌ಇ) ಮಂಗಳವಾರ ಈ ಎರಡೂ ಪರೀಕ್ಷೆಗಳ ಫಲಿತಾಂಶವನ್ನು ಪ್ರಕಟಿಸಿತ್ತು.
ಅಂಕಿ ಅಂಶಗಳ ಪ್ರಕಾರ, 10ನೇ ತರಗತಿಯಲ್ಲಿ ಎ.ಐ ವಿಷಯದ ನಂತರ ಮಾಹಿತಿ ತಂತ್ರಜ್ಞಾನ (14,548), ಗಣಿತ (7,594) ವಿಷಯಗಳಲ್ಲಿ ಅತ್ಯಧಿಕ ವಿದ್ಯಾರ್ಥಿಗಳು ಪೂರ್ಣ ಅಂಕಗಳಿಸಿದ್ದಾರೆ. ನೇಪಾಳಿ ಮತ್ತು ಕಾಶ್ಮೀರಿ ವಿಷಯದ ಪರೀಕ್ಷೆಗಳಲ್ಲಿ ತಲಾ ಒಬ್ಬ ವಿದ್ಯಾರ್ಥಿ ಪೂರ್ಣಾಂಕ ಗಳಿಸಿದ ಸಾಧನೆ ಮಾಡಿದ್ದಾರೆ.
12ನೇ ತರಗತಿ ಪರೀಕ್ಷೆಯಲ್ಲಿ ಚಿತ್ರಕಲೆ ವಿಷಯದಲ್ಲಿ 20,491 ವಿದ್ಯಾರ್ಥಿಗಳು ಶೇ 100ರಷ್ಟು ಅಂಕ ಗಳಿಸಿದ್ದರೆ, ನಂತರದ ಸ್ಥಾನದಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ (4,291) ಮತ್ತು ಮನೋವಿಜ್ಞಾನ (3,011) ವಿಷಯದಲ್ಲಿ ಹೆಚ್ಚಿನ ಮಕ್ಕಳು ಪೂರ್ಣಾಂಕ ಗುರಿ ಮುಟ್ಟಿದ್ದಾರೆ.
ಮಣಿಪುರಿ, ಎಲೆಕ್ಟ್ರಾನಿಕ್ಸ್ ಅಂಡ್ ಹಾರ್ಡ್‌ವೆರ್, ವಿನ್ಯಾಸ ಚಿಂತನೆ ಮತ್ತು ನಾವಿನ್ಯತೆ ಮತ್ತು ಕನ್ನಡ ವಿಷಯದಲ್ಲಿ ತಲಾ ಒಬ್ಬ ವಿದ್ಯಾರ್ಥಿಯು ಶೇ 100ರಷ್ಟು ಅಂಕ ಗಳಿಸಿದ್ದಾರೆ.
10 ಮತ್ತು 12ನೇ ತರಗತಿಯ ಪರೀಕ್ಷೆಗಳಲ್ಲಿ ಶೇ 90ಕ್ಕೂ ಅಧಿಕ ಅಂಕಗಳಿಸಿದವರಲ್ಲಿ ಬಾಲಕಿಯರೇ ಮುಂದಿದ್ದಾರೆ. ಒಟ್ಟಾರೆ, 10ನೇ ತರಗತಿಯಲ್ಲಿ ಉತ್ತೀರ್ಣ ಪ್ರಮಾಣ ಶೇ 93ರಷ್ಟಿದ್ದರೆ, 12ನೇ ತರಗತಿಯಲ್ಲಿ ಈ ಪ್ರಮಾಣ ಶೇ 88.39ರಷ್ಟಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.