ADVERTISEMENT

ಫಲಿತಾಂಶ: ಸಮಸ್ಯೆ ಆಲಿಸಲು ಸಿಬಿಎಸ್‌ಇಗೆ ಸೂಚನೆ

ಪಿಟಿಐ
Published 13 ಡಿಸೆಂಬರ್ 2021, 21:46 IST
Last Updated 13 ಡಿಸೆಂಬರ್ 2021, 21:46 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ಫಲಿತಾಂಶ ಸುಧಾರಣೆಗಾಗಿ ಮರುಪರೀಕ್ಷೆ ಬರೆದಿದ್ದ 12ನೇ ತರಗತಿ ವಿದ್ಯಾರ್ಥಿಗಳ ಸಮಸ್ಯೆಯನ್ನು ಕೇಂದ್ರ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (ಸಿಬಿಎಸ್‌ಇ) ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯಲು ಅವರು ಪಡೆದ ಅಂಕಗಳೇ ಆಧಾರ. ಹೀಗಾಗಿ, ಅಂಕಗಳ ಸುಧಾರಣೆ ಉದ್ದೇಶದಿಂದ ಮತ್ತೆ ಪರೀಕ್ಷೆ ಬರೆದಿದ್ದವರ ಸಮಸ್ಯೆ ಗಮನಿಸಬೇಕು ಎಂದು ಕೋರ್ಟ್‌ ತಿಳಿಸಿದೆ.

ವಿದ್ಯಾರ್ಥಿಗಳು ಮರುಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಲು ಆಗದಿದ್ದಲ್ಲಿ, ಈ ಹಿಂದಿನ ಫಲಿತಾಂಶವನ್ನೇ ಉಳಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಸಿಬಿಎಸ್‌ಇಯು ಇದೇ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್‌ ಮತ್ತು ಸಿ.ಟಿ.ರವಿಕುಮಾರ್‌ ಅವರಿದ್ದ ಪೀಠಕ್ಕೆ ಮಾಹಿತಿ ನೀಡಿತು.

ADVERTISEMENT

‘ವಿದ್ಯಾರ್ಥಿಗಳು ಹಿಂದೆ ಪಡೆದಿದ್ದ ಅಂಕಗಳ ಆಧಾರದಲ್ಲಿ ಪ್ರವೇಶ ಪಡೆದಿದ್ದಾರೆ. ಹೀಗಾಗಿ ಮೂಲ ಫಲಿತಾಂಶ ಉಳಿಸಿಕೊಳ್ಳುವ ಸ್ವಾತಂತ್ರ್ಯವನ್ನು ನೀಡಬೇಕು‘ ಎಂದು ಅರ್ಜಿದಾರರ ಪ್ರತಿನಿಧಿಸಿದ್ದ ವಕೀಲರು ಪ್ರತಿಪಾದಿಸಿದರು.

‘ಇದು, ಶಾಶ್ವತ ವ್ಯವಸ್ಥೆಯಲ್ಲ. ಒಂದು ಬಾರಿಯ ವ್ಯವಸ್ಥೆಯಾದ್ದರಿಂದ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಮಂಡಳಿಯು ಗಮನಿಸಬೇಕು‘ ಎಂದು ಪೀಠವು ಸಿಬಿಎಸ್‌ಇ ಪ್ರತಿನಿಧಿಸಿದ್ದ ವಕೀಲರಿಗೆ ಸೂಚಿಸಿತು.

ಈ ಬಗ್ಗೆ ಮಂಡಳಿಯ ಸಲಹೆಯನ್ನು ಪಡೆಯಲಾಗುವುದು ಎಂದು ವಕೀಲರು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.