ADVERTISEMENT

ಇನ್ಮುಂದೆ ಸಿಬಿಎಸ್‌ಇ 10ನೇ ತರಗತಿಗೆ ವರ್ಷದಲ್ಲಿ 2 ಬಾರಿ ಪರೀಕ್ಷೆ!

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2025, 16:27 IST
Last Updated 25 ಫೆಬ್ರುವರಿ 2025, 16:27 IST
   

ನವದೆಹಲಿ: 10ನೇ ತರಗತಿಯ ಪರೀಕ್ಷೆಗಳನ್ನು 2026ರಿಂದ ವರ್ಷದಲ್ಲಿ ಎರಡು ಬಾರಿ ನಡೆಸುವ ಕರಡು ನಿಯಮಾವಳಿಗಳಿಗೆ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು (ಸಿಬಿಎಸ್‌ಇ) ಮಂಗಳವಾರ ಅನುಮೋದನೆ ನೀಡಿದೆ.

‘ಕರಡು ನಿಯಮಾವಳಿಗಳನ್ನು ಪ್ರಕಟಿಸಲಾಗಿದ್ದು, ಸಂಬಂಧಿಸಿದವರು ಮಾರ್ಚ್ 9ರವರೆಗೆ ತಮ್ಮ ಪ್ರತಿಕ್ರಿಯೆ ಸಲ್ಲಿಸಬಹುದು. ನಂತರ ಪರೀಕ್ಷಾ ನೀತಿಯನ್ನು ಅಂತಿಮಗೊಳಿಸಲಾಗುತ್ತದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕರಡು ನಿಯಮಾವಳಿ ಪ್ರಕಾರ, ಮೊದಲ ಹಂತದ ಪರೀಕ್ಷೆಗಳು ಫೆಬ್ರುವರಿ 17ರಿಂದ ಮಾರ್ಚ್ 6ರವರೆಗೆ ಹಾಗೂ ಎರಡನೇ ಹಂತದ ಪರೀಕ್ಷೆಗಳು ಮೇ 5ರಿಂದ 20ರವರೆಗೆ ನಡೆಯಲಿವೆ. 

ADVERTISEMENT

‘ಎರಡೂ ಆವೃತ್ತಿಯ ಪರೀಕ್ಷೆಗಳನ್ನು ಪೂರ್ಣ ಪಠ್ಯಕ್ರಮದಲ್ಲಿ ನಡೆಸಲಾಗುವುದು. ಎರಡು ಆವೃತ್ತಿಗಳಲ್ಲೂ ಒಂದೇ ಪರೀಕ್ಷಾ ಕೇಂದ್ರ ಒದಗಿಸಲಾಗುವುದು. ಪರೀಕ್ಷಾ ಶುಲ್ಕ ಹೆಚ್ಚಿಸಲಾಗುತ್ತಿದ್ದು, ಅರ್ಜಿ ಸಲ್ಲಿಸುವಾಗಲೇ ವಿದ್ಯಾರ್ಥಿಗಳಿಂದ ಪರೀಕ್ಷಾ ಶುಲ್ಕ ಸಂಗ್ರಹಿಸಲಾಗುತ್ತದೆ. ಮೊದಲ ಮತ್ತು ಎರಡನೇ ಆವೃತ್ತಿಯ ಪರೀಕ್ಷೆಗಳನ್ನು ಹೊರತುಪಡಿಸಿ ಯಾವುದೇ ವಿಶೇಷ ಪರೀಕ್ಷೆಗಳನ್ನು ನಡೆಸಲಾಗುವುದಿಲ್ಲ’ ಎಂದು ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಶಾಲಾ ವರ್ಷದಲ್ಲಿ ಎರಡು ಬಾರಿ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಅವಕಾಶ ನೀಡಬೇಕೆಂದು ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಶಿಫಾರಸು ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.