ADVERTISEMENT

ಕೋವಿಶೀಲ್ಡ್, ಕೋವ್ಯಾಕ್ಸಿನ್ ಮಿಶ್ರ ಪ್ರಯೋಗಕ್ಕೆ ತಜ್ಞರ ಸಮಿತಿ ಶಿಫಾರಸು

ಪಿಟಿಐ
Published 30 ಜುಲೈ 2021, 3:29 IST
Last Updated 30 ಜುಲೈ 2021, 3:29 IST
ಸಾಂದರ್ಭಿಕ ಚಿತ್ರ – ಎಎಫ್‌ಪಿ
ಸಾಂದರ್ಭಿಕ ಚಿತ್ರ – ಎಎಫ್‌ಪಿ   

ನವದೆಹಲಿ: ಕೋವಿಡ್‌ ಲಸಿಕೆಗಳಾದ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್‌ಗಳ ಮಿಶ್ರ ಪ್ರಯೋಗಕ್ಕೆ ಕೇಂದ್ರ ಔಷಧ ಗುಣಮಟ್ಟ ಪ್ರಾಧಿಕಾರ ಶಿಫಾರಸು ಮಾಡಿದೆ. ಕ್ಲಿನಿಕಲ್ ಟ್ರಯಲ್‌ ನಡೆಸಲು ವೆಲ್ಲೂರ್‌ನ ‘ಕ್ರಿಶ್ಚಿಯನ್ ಮೆಡಿಕಲ್ ಕಾಲೇಜ್‌’ಗೆ (ಸಿಎಂಸಿ) ಅನುಮತಿ ನೀಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಪ್ರಾಧಿಕಾರದ ವಿಷಯ ತಜ್ಞರ ಸಮಿತಿಯು ವಿಸ್ತೃತ ಚರ್ಚೆಯ ಬಳಿಕ 300 ಮಂದಿ ಆರೋಗ್ಯವಂತರ ಮೇಲೆ ಲಸಿಕೆಯ ಮಿಶ್ರಣದ ನಾಲ್ಕನೇ ಹಂತದ ಕ್ಲಿನಿಕಲ್ ಟ್ರಯಲ್ ನಡೆಸಲು ಸಿಎಂಸಿಗೆ ಅನುಮತಿ ನೀಡಿದೆ.

‘ಒಬ್ಬ ವ್ಯಕ್ತಿಗೆ ಲಸಿಕೆಯ ಕೋರ್ಸ್‌ ಅನ್ನು ಪೂರ್ಣಗೊಳಿಸುವ ಸಲುವಾಗಿ ಎರಡು ಭಿನ್ನ ಲಸಿಕೆಗಳ, ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಡೋಸ್‌ ನೀಡಬಹುದೇ ಎಂಬುದನ್ನು ತಿಳಿಯುವುದು ಈ ಪ್ರಯೋಗದ ಉದ್ದೇಶ’ ಎಂದು ಮೂಲಗಳು ಹೇಳಿವೆ.

ADVERTISEMENT

18 ವರ್ಷ ಮೇಲ್ಪಟ್ಟವರಲ್ಲಿ ನಡೆಯುತ್ತಿರುವ 2 ಮತ್ತು 3ನೇ ಹಂತದ ಕ್ಲಿನಿಕಲ್ ಟ್ರಯಲ್‌ನ ದತ್ತಾಂಶಗಳ ಆಧಾರದಲ್ಲಿ 15ರಿಂದ 17 ವರ್ಷದ ವರೆಗಿನವರಲ್ಲಿ 2 ಮತ್ತು 3ನೇ ಹಂತದ ಕ್ಲಿನಿಕಲ್ ಟ್ರಯಲ್‌ ನಡೆಸುವ ಬಗ್ಗೆಯೂ ತಜ್ಞರ ಸಮಿತಿ ಚರ್ಚೆ ನಡೆಸಿದೆ.

‘18 ವರ್ಷ ಮೇಲ್ಪಟ್ಟವರ 2 ಮತ್ತು 3ನೇ ಹಂತದ ಕ್ಲಿನಿಕಲ್ ಟ್ರಯಲ್‌ನಲ್ಲಿ ಸುರಕ್ಷತೆ ಮತ್ತು ಪ್ರತಿರೋಧ ಶಕ್ತಿಗೆ ಸಂಬಂಧಿಸಿ ದೊರೆತ ದತ್ತಾಂಶಗಳನ್ನು ಕೇಂದ್ರ ಔಷಧ ಗುಣಮಟ್ಟ ಪ್ರಾಧಿಕಾರಕ್ಕೆ ಸಲ್ಲಿಸುವಂತೆಯೂ ತಜ್ಞರ ಸಮಿತಿ ಸೂಚಿಸಿದೆ ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.