ADVERTISEMENT

ಗಡಿಯಲ್ಲಿ ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ ಈ ವರ್ಷ ಕಡಿಮೆ: ವರದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಡಿಸೆಂಬರ್ 2021, 8:11 IST
Last Updated 24 ಡಿಸೆಂಬರ್ 2021, 8:11 IST
ಸಾಂದರ್ಭಿಕ ಚಿತ್ರ – ಪಿಟಿಐ ಚಿತ್ರ
ಸಾಂದರ್ಭಿಕ ಚಿತ್ರ – ಪಿಟಿಐ ಚಿತ್ರ   

ಶ್ರೀನಗರ: 2021ರಲ್ಲಿ ಜಮ್ಮು ಮತ್ತು ಕಾಶ್ಮೀರ ಅಂತರರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ ಕಡಿಮೆಯಾಗಿರುವುದು ತಿಳಿದು ಬಂದಿದೆ.

2020ರಲ್ಲಿ ಪಾಕಿಸ್ತಾನವು 5,100 ಬಾರಿ ಕದನ ವಿರಾಮ ಉಲ್ಲಂಘಿಸಿತ್ತು. ಇದು 2003ರ ಬಳಿಕ ಕದನ ವಿರಾಮ ಉಲ್ಲಂಘನೆಯ ಗರಿಷ್ಠ ಪ್ರಕರಣಗಳಾಗಿದ್ದವು. ಆದರೆ ಈ ವರ್ಷ ಗಣನೀಯವಾಗಿ ಇಳಿಕೆ ಕಂಡುಬಂದಿದೆ ಎಂದು ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.

2003ರಲ್ಲಿ ಕದನ ವಿರಾಮ ಒಪ್ಪಂದಕ್ಕೆ ಉಭಯ ದೇಶಗಳ ಸೇನಾಪಡೆಗಳು ಸಹಿ ಹಾಕಿದ ಬಳಿಕ 2020ರಲ್ಲಿ ಅತಿಹೆಚ್ಚು ಉಲ್ಲಂಘನೆ ನಡೆದಿತ್ತು. ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಮತ್ತು ಅಂತರರಾಷ್ಟ್ರೀಯ ಗಡಿ (ಐಬಿ) ಪ್ರದೇಶಗಳಲ್ಲಿ ಕಳೆದ ವರ್ಷ ಕದನ ವಿರಾಮ ಉಲ್ಲಂಘಿಸಿ ಪಾಕಿಸ್ತಾನ ಸೇನೆ ನಡೆಸಿದ್ದ ದಾಳಿಗಳಲ್ಲಿ ಒಟ್ಟು 36 ನಾಗರಿಕರು ಹತ್ಯೆಗೀಡಾಗಿದ್ದು, 130 ಮಂದಿ ಗಾಯಗೊಂಡಿದ್ದರು ಎಂದು ವರದಿ ಉಲ್ಲೇಖಿಸಿದೆ.

ADVERTISEMENT

2019ರಲ್ಲಿಯೂ 3,289 ಬಾರಿ ಪಾಕಿಸ್ತಾನವು ಕದನ ವಿರಾಮ ಉಲ್ಲಂಘಿಸಿತ್ತು. 2018ರಲ್ಲಿಯೂ ಸುಮಾರು 3,000 ಬಾರಿ ಕದನ ವಿರಾಮ ಉಲ್ಲಂಘಿಸಿ ದಾಳಿ ನಡೆಸಿತ್ತು. 2017ರಲ್ಲಿ 971 ಪ್ರಕರಣಗಳು ವರದಿಯಾಗಿದ್ದವು.

2021ರ ಮೊದಲ ಆರು ತಿಂಗಳುಗಳಲ್ಲಿ 664 ಬಾರಿ ಮಾತ್ರ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ದಾಳಿ ನಡೆಸಿದೆ. ಈ ಪೈಕಿ ಶೇ 99ರಷ್ಟು ಜನವರಿ–ಫೆಬ್ರುವರಿ ಅವಧಿಯಲ್ಲಿಯೇ ವರದಿಯಾಗಿವೆ.

ಭಾರತವು ಪಾಕಿಸ್ತಾನದೊಂದಿಗೆ ಸುಮಾರು 3,323 ಕಿಲೋ ಮೀಟರ್ ಉದ್ದದ ಗಡಿ ಪ್ರದೇಶವನ್ನು ಹೊಂದಿದೆ. ಈ ಪೈಕಿ 221 ಕಿಲೋ ಮೀಟರ್‌ ಅಂತರರಾಷ್ಟ್ರೀಯ ಗಡಿ ಮತ್ತು 740 ಕಿಲೋ ಮೀಟರ್ ಗಡಿ ನಿಯಂತ್ರಣ ರೇಖೆ ಜಮ್ಮು–ಕಾಶ್ಮೀರದಲ್ಲಿ ಬರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.