ADVERTISEMENT

49 ಪ್ರಸಿದ್ಧರ ಪತ್ರಕ್ಕೆ 62 ಖ್ಯಾತನಾಮರ ಉತ್ತರ

ಗುಂಪು ಹಲ್ಲೆ ವಿರುದ್ಧ ಪ್ರಧಾನಿಗೆ ಬರೆದ ಪತ್ರಕ್ಕೆ ತಿರುಗೇಟು

​ಪ್ರಜಾವಾಣಿ ವಾರ್ತೆ
Published 26 ಜುಲೈ 2019, 19:46 IST
Last Updated 26 ಜುಲೈ 2019, 19:46 IST

ಮುಂಬೈ: ಗುಂಪು ಹಲ್ಲೆ ಪ್ರಕರಣಗಳು ಹೆಚ್ಚುತ್ತಿರುವುದನ್ನು ಖಂಡಿಸಿ ಮತ್ತು ‘ಜೈ ಶ್ರೀರಾಮ್‌’ ಎಂಬುದು ಯುದ್ಧ ಘೋಷಣೆಯಾಗುತ್ತಿದೆ ಎಂದು ಆರೋಪಿಸಿ ದೇಶದ ಕೆಲವು ಪ್ರಸಿದ್ಧ ವ್ಯಕ್ತಿಗಳೂ ಹಾಗೂ ಚಿತ್ರ ನಟರು ಪ್ರಧಾನಿ ನರೇಂದ್ರ ಮೋದಿಗೆ ಬಹಿರಂಗ ಪತ್ರ ಬರೆದಿರುವುದಕ್ಕೆ ಶುಕ್ರವಾರ ಬಾಲಿವುಡ್‌ನ ಕೆಲವು ತಾರೆಯರು ಬಹಿರಂಗ ಪತ್ರದ ಮೂಲಕವೇ ಪ್ರತಿಕ್ರಿಯೆ ನೀಡಿದ್ದಾರೆ.

ಮೋದಿಗೆ ಪತ್ರ ಬರೆದ ಗಣ್ಯರು, ‘ಆಯ್ದ ಘಟನೆಗಳನ್ನು ತಪ್ಪಾಗಿ ನಿರೂಪಿಸಿ, ಅವುಗಳ ಬಗ್ಗೆ ಮಾತ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ’ ಎಂದು ಈ ಕಲಾವಿದರು ಆರೋಪಿಸಿದ್ದಾರೆ. ಚಿತ್ರ ಕಲಾವಿದರಾದ ಅಡೂರು ಗೋಪಾಲಕೃಷ್ಣನ್‌, ನಿರ್ದೇಶಕ ಮಣಿರತ್ನಂ, ಅನುರಾಗ್‌ ಕಶ್ಯಪ್‌, ಶ್ಯಾಂ ಬೆನಗಲ್‌, ಅಪರ್ಣಾ ಸೇನ್‌ ಸೇರಿದಂತೆ 49 ಮಂದಿ ಕಲಾವಿದರು ಮತ್ತು ಗಣ್ಯರು ಎರಡು ದಿನಗಳ ಹಿಂದೆಯಷ್ಟೇ ಮೋದಿಗೆ ಬಹಿರಂಗ ಪತ್ರ ಬರೆದಿದ್ದರು.

ಇದಕ್ಕೆ ಉತ್ತರವಾಗಿ ಚಿತ್ರ ನಿರ್ದೇಶಕ ಅಶೋಕ್‌ ಪಂಡಿತ್‌, ನಟಿ ಕಂಗನಾ ರಣಾವತ್‌, ಗೀತಸಾಹಿತಿ ಪ್ರಸೂನ್‌ ಜೋಶಿ, ನೃತ್ಯಪಟು ಸೋನಲ್‌ ಮಾನ್‌ಸಿಂಗ್‌, ಮಧುರ್‌ ಭಂಡಾರ್ಕರ್‌, ವಿವೇಕ್‌ ಅಗ್ನಿಹೋತ್ರಿ ಸೇರಿ 62 ಮಂದಿ ಕಲಾವಿದರು ಸಹಿಯುಳ್ಳ ಪತ್ರವನ್ನು ಶುಕ್ರವಾರ ಬಿಡುಗಡೆ ಮಾಡಲಾಗಿದೆ.

ADVERTISEMENT

‘ಜಾಗತಿಕ ಮಟ್ಟದಲ್ಲಿ ಭಾರತದ ಸ್ಥಾನಮಾನವನ್ನು ಗಟ್ಟಿಗೊಳಿಸುವಲ್ಲಿ, ಸಕಾರಾತ್ಮಕ ರಾಷ್ಟ್ರೀಯತೆ ಮತ್ತು ಮಾನವೀಯತೆಯ ಆಧಾರದಲ್ಲಿ ಉತ್ತಮ ಆಡಳಿತ ನೀಡುವ ಮೋದಿ ಅವರ ಶ್ರಮಕ್ಕೆ ಕಳಂಕ ತರುವುದು ಆ ಪತ್ರದ (ಜುಲೈ 23ರಂದು ಬರೆದ ಪತ್ರ) ಉದ್ದೇಶವಾಗಿದೆ. ಶಾಲೆಗಳನ್ನು ಸುಟ್ಟು ಹಾಕುವುದಾಗಿ ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳು ಬೆದರಿಕೆ ಹಾಕಿದಾಗ, ದೇಶದ ಕೆಲವು ವಿಶ್ವವಿದ್ಯಾಲಯಗಳ ಕ್ಯಾಂಪಸ್‌ ಒಳಗೆ ಭಾರತವನ್ನು ವಿಭಜಿಸುವ ‘ಟುಕಡೆ– ಟುಕಡೆ’ ಘೋಷಣೆ ಮೊಳಗಿದಾಗ ಈ ತಂಡದವರು ಮೌನ ವಹಿಸಿದ್ದರು. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ದೇಶದ ಸ್ವಾತಂತ್ರ್ಯ, ಏಕತೆ, ಸಮಗ್ರತೆಯನ್ನು ಬೇಕಾದರೂ ಬಲಿ ಕೊಡಬಹುದು ಎಂದು ಈ ಗುಂಪು ಭಾವಿಸಿದಂತಿದೆ. ಇವರಲ್ಲಿ ಕೆಲವರು ಹಿಂದೆ ದಂಗೆಕೋರರು, ಪ್ರತ್ಯೇಕತಾವಾ ದಿಗಳು ಹಾಗೂ ಭಯೋತ್ಪಾದಕರ ಪ್ರಚಾರಕರಂತೆ ಮಾತನಾಡಿದ್ದೂ ಇದೆ. ಇವೆಲ್ಲವನ್ನೂ ಗಮನಿಸಿದರೆ ಅವರ ಆತಂಕವು ಅಪ್ರಾಮಾಣಿಕವಾದುದು’ ಎಂದು ಪತ್ರದಲ್ಲಿ ಹೇಳಲಾಗಿದೆ.

‘ಪ್ರಧಾನಿಗೆ ಪತ್ರ ಬರೆದ ಇದೇ ತಂಡ, ತ್ರಿವಳಿ ತಲಾಖ್‌ ವಿರೋಧಿಸಿದ ಮಹಿಳೆಯರ ಪರ ನಿಲ್ಲುವ ಧೈರ್ಯ ತೋರಲಿಲ್ಲ. ಆಯ್ದ ವಿಚಾರಗಳ ಬಗ್ಗೆ ಮಾತ್ರ ಪ್ರತಿಕ್ರಿಯಿಸುವ ಈ ಗುಂಪು, ದೇಶವನ್ನು ವಿಭಜಿಸುವ ಮತ್ತು ದುರ್ಬಲಗೊಳಿಸುವ ಕಾರ್ಯಸೂಚಿಯಿಂದ ಮಾಡುತ್ತಿದೆ ಎಂಬುದು ಸ್ಪಷ್ಟ’ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.

‘ಈ ತಂಡವು ಬಹುಸಂಖ್ಯಾತರ ಭಾವನೆಗಳನ್ನು ತಿರಸ್ಕರಿಸಿದೆ. ರಾಮನ ಭಕ್ತರನ್ನು ಬಾರಿಬಾರಿ ಅಪಹಾಸ್ಯ ಮಾಡುತ್ತಾ ಬಂದಿದೆ’ ಎಂದೂ ಪತ್ರದಲ್ಲಿ ಆರೋಪಿಸಲಾಗಿದೆ.

ಚಂದ್ರಗ್ರಹಕ್ಕೆ ಟಿಕೆಟ್‌ ಕೊಡಿಸಿ: ಅಡೂರ್‌

ತಿರುವನಂತಪುರ: ತಾವು ಮೋದಿಗೆ ಬರೆದ ಪತ್ರಕ್ಕೆ ಬಿಜೆಪಿಯ ಕೇರಳ ರಾಜ್ಯಘಟಕದ ವಕ್ತಾರ ಬಿ. ಗೋಪಾಲಕೃಷ್ಣನ್‌ ನೀಡಿರುವ ಪ್ರತಿಕ್ರಿಯೆಗೆ ಉತ್ತರಿಸಿರುವ ಚಿತ್ರ ನಿರ್ದೇಶಕ ಅಡೂರ್‌ ಗೋಪಾಲಕೃಷ್ಣನ್‌, ‘ನನಗೆ ಚಂದ್ರನ ಬಳಿಗೆ ಹೋಗಲು ಟಿಕೆಟ್‌ ಕೊಡಿಸಿ ಮತ್ತು ಅಲ್ಲಿ ಒಂದು ರೂಮ್‌ ಕಾಯ್ದಿರಿಸಿ’ ಎಂದಿದ್ದಾರೆ.

‘ಜೈ ಶ್ರೀರಾಮ್‌ ಘೋಷಣೆ ಕೇಳಲು ಆಗುತ್ತಿಲ್ಲವಾದರೆ ಗೋಪಾಲಕೃಷ್ಣನ್‌ ಅವರು ಚಂದ್ರನ ಮೇಲೆ ಹೋಗಿ ನೆಲೆಸಲಿ’ ಎಂದು ಬಿಜೆಪಿಯ ವಕ್ತಾರ ಗುರುವಾರ ಟೀಕಿಸಿದ್ದರು. ಅದಕ್ಕೆ ಪ್ರತಿಕ್ರಿಯಿಸಿ, ‘ನಾನು ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಓಡಾಡಿದ್ದೇನೆ. ಚಂದ್ರನ ಬಗ್ಗೆ ನನಗೆ ವಿಶೇಷ ಆಸಕ್ತಿ ಇದೆ. ಚಂದ್ರನ ನೋಡುವ ಬಯಕೆಯೂ ಇದೆ. ಈ ಕೊಡುಗೆ ಆಕರ್ಷಕವಾಗಿದೆ. ಅವರು ನನಗಾಗಿ ಒಂದು ಟಿಕೆಟ್‌ ಕಾಯ್ದಿರಿಸಬಹುದು’ ಎಂದು ಗೋಪಾಲಕೃಷ್ಣನ್‌ ಅವರು ಸುದ್ದಿವಾಹಿನಿಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಗಾಯಕಿ ಆಶಾ ಹಾಸ್ಯ

ಬಾಲಿವುಡ್‌ ಕಲಾವಿದರ ನಡುವೆ ಸೃಷ್ಟಿಯಾಗಿರುವ ಈ ‘ಪತ್ರ ಸಮರ’ಕ್ಕೆ ಹಿರಿಯ ಗಾಯಕಿ ಆಶಾ ಭೋಂಸ್ಲೆ ಅವರು ಹಾಸ್ಯಮಿಶ್ರಿತ ಪ್ರತಿಕ್ರಿಯಿಸಿದ್ದಾರೆ.

ತಮ್ಮ ಟ್ವೀಟ್‌ ಒಂದರಲ್ಲಿ ಎರಡು ಪತ್ರಗಳನ್ನು ಉಲ್ಲೇಖಿಸಿರುವ ಅವರು, ‘ಇನ್ನು ಮುಂದೆ ನಾನು, ‘ದಂ ಮಾರೊ ದಂ.. ಬೊಲೊ ಸುಬಹ ಶ್ಯಾಂ ಹರೇ ಕೃಷ್ಣ ಹರೇ ರಾಂ’ ಎಂಬ ಅಮರ ಗೀತೆಯನ್ನು ಹಾಡಬಹುದೇ ಅಥವಾ ಇಲ್ಲವೇ’ ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.