ADVERTISEMENT

2027ರ ಜನಗಣತಿಗೆ ಸಿದ್ಧಗೊಳ್ಳುತ್ತಿದೆ ಪ್ರಶ್ನಾವಳಿ: ಕೇಂದ್ರ ಸರ್ಕಾರ

ಪಿಟಿಐ
Published 2 ಡಿಸೆಂಬರ್ 2025, 13:51 IST
Last Updated 2 ಡಿಸೆಂಬರ್ 2025, 13:51 IST
   

ನವದೆಹಲಿ: 2027ರ ಜನಗಣತಿಗೆ ಸಂಬಂಧಿಸಿದಂತೆ ಪ್ರಶ್ನಾವಳಿ ರಚಿಸಲಾಗುತ್ತಿದ್ದು, ರಿಜಿಸ್ಟ್ರಾರ್‌ ಜನರಲ್‌ ಹಾಗೂ ಜನಗಣತಿ ಆಯುಕ್ತರು ಆ ಪ್ರಶ್ನೆಗಳನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ಜನಗಣತಿ ಸಂದರ್ಭದಲ್ಲೇ ಜಾತಿಗಣತಿಯನ್ನೂ ನಡೆಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ಮಂಗಳವಾರ ಮಾಹಿತಿ ನೀಡಿದೆ. 

ಜನಗಣತಿಗೆ ಸಂಬಂಧಿಸಿದಂತೆ ಲೋಕಸಭಾ ಪ್ರತಿಪಕ್ಷದ ನಾಯಕ ರಾಹುಲ್‌ ಗಾಂಧಿ ಸೇರಿ ಹಲವು ಸಂಸದರು ಕೇಳಿದ್ದ ಪ್ರಶ್ನೆಗಳಿಗೆ ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ನಿತ್ಯಾನಂದ ರೈ ಅವರು ಲಿಖಿತ ಉತ್ತರ ನೀಡಿದ್ದಾರೆ.

ಪ್ರಶ್ನಾವಳಿಯ ಕರಡು ಪ್ರತಿಯನ್ನು ಪ್ರಕಟಗೊಳಿಸಿ ಸಾರ್ವಜನಿಕರು ಅಥವಾ ಸಾರ್ವಜನಿಕ ಪ್ರತಿನಿಧಿಗಳ ಸಲಹೆ ಪಡೆಯುವಿರೇ ಎಂಬ ಪ್ರಶ್ನೆಗೆ ಉತ್ತರಿಸಿರುವ ರೈ,‘ ವಿವಿಧ ಸಚಿವಾಲಯಗಳು, ಇಲಾಖೆಗಳು, ಸಂಸ್ಥೆಗಳು, ಜನಗಣತಿ ದತ್ತಾಂಶ ಬಳಕೆದಾರರು ಸೇರಿದಂತೆ ಹಲವು ಪಾಲುದಾರರ ಸಲಹೆಗಳ ಆಧಾರದ ಮೇಲೆ ಪ್ರಶ್ನಾವಳಿಯನ್ನು ಅಂತಿಮಗೊಳಿಸಲಾಗುತ್ತದೆ’ ಎಂದಿದ್ದಾರೆ.

ADVERTISEMENT

ಪ್ರಶ್ನಾವಳಿ ಅಂತಿಮಗೊಳಿಸುವ ಮೊದಲು ಅವುಗಳ ಕಾರ್ಯಸಾಧ್ಯತೆಯನ್ನು ಖಾತರಿಪಡಿಸಿಕೊಳ್ಳಲು ಪ್ರಾಯೋಗಿಕ ಗಣತಿ ನಡೆಸಲಾಗಿದೆ ಎಂದೂ ಮಾಹಿತಿ ನೀಡಿದ್ದಾರೆ.

ಇದಲ್ಲದೇ, ಗಣತಿಯನ್ನು ಎರಡು ಹಂತಗಳಲ್ಲಿ ನಡೆಸಲಾಗುತ್ತಿದೆ ಎಂದಿರುವ ಅವರು, ಮನೆಗಣತಿಯನ್ನು 2026ರ ಏಪ್ರಿಲ್‌ 1ರಿಂದ ಸೆಪ್ಟೆಂಬರ್‌ 30ರ ಅವಧಿಯಲ್ಲಿ ನಡೆಯಲಿದೆ. ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಅನುಕೂಲವಾಗುವಂತೆ 30 ದಿನಗಳೊಳಗೆ ಈ ಪ್ರಕ್ರಿಯೆಯನ್ನು ನಡೆಸಲಾಗುತ್ತದೆ ಎಂದಿದ್ದಾರೆ. ಜತೆಗೆ ಎರಡನೇ ಹಂತದಲ್ಲಿ 2027ರ ಫೆಬ್ರುವರಿಯಲ್ಲಿ ಜನಗಣತಿಯನ್ನು ಆರಂಭಿಸಲಾಗುತ್ತದೆ ಎಂದೂ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.