ADVERTISEMENT

ಮೀಸಲಾತಿ: ವಿ.ವಿ ಒಂದು ಘಟಕ

ಸುಗ್ರೀವಾಜ್ಞೆಗೆ ಕೇಂದ್ರ ಸಂಪುಟ ನಿರ್ಧಾರ

ಪಿಟಿಐ
Published 7 ಮಾರ್ಚ್ 2019, 20:06 IST
Last Updated 7 ಮಾರ್ಚ್ 2019, 20:06 IST
   

ನವದೆಹಲಿ:ಪ್ರಾಧ್ಯಾಪಕರ ನೇರ ನೇಮಕಾತಿಯಲ್ಲಿ ಮೀಸಲಾತಿ ಕಲ್ಪಿಸಲು ಇಡೀ ವಿಶ್ವವಿದ್ಯಾಲಯ ಅಥವಾ ಕಾಲೇಜನ್ನು ಒಂದು ಘಟಕವಾಗಿ ಪರಿಗಣಿಸುವ ಹಳೆಯ ಪದ್ಧತಿಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಕೇಂದ್ರ ಸಚಿವ ಸಂಪುಟವು ಗುರುವಾರ ಒಪ್ಪಿಗೆ ಸೂಚಿಸಿದೆ.

ಈ ಮೂಲಕ ‘ಕೇಂದ್ರೀಯ ಶೈಕ್ಷಣಿಕ ಸಂಸ್ಥೆಗಳ (ಶಿಕ್ಷಕರ ಕೇಡರ್‌ನಲ್ಲಿ ಮೀಸಲಾತಿ) ಸುಗ್ರೀವಾಜ್ಞೆ–2019’ನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ.

ಇಡೀ ವಿಶ್ವವಿದ್ಯಾಲಯವನ್ನೇ ಒಂದು ಘಟಕ ಎಂದು ಪರಿಗಣಿಸುವ ಪದ್ಧತಿಯನ್ನು ಅಲಹಾಬಾದ್ ಹೈಕೋರ್ಟ್‌ 2017ರ ಏಪ್ರಿಲ್‌ನಲ್ಲಿ ರದ್ದುಪಡಿಸಿತ್ತು. ಬದಲಿಗೆ ವಿಶ್ವವಿದ್ಯಾಲಯದ ಪ್ರತಿ ವಿಭಾಗವನ್ನು ಮೂಲ ಘಟಕವನ್ನಾಗಿ ಪರಿಗಣಿಸಬೇಕು. ಮೀಸಲಾತಿಯನ್ನು ಆ ಮಟ್ಟದಲ್ಲೇ ನಿರ್ಧರಿಸಬೇಕು ಎಂದು ಹೈಕೋರ್ಟ್ ಹೇಳಿತ್ತು. ಈ ಆದೇಶದ ಆಧಾರದಲ್ಲೇ ಮೀಸಲಾತಿಯನ್ನು ಲೆಕ್ಕಹಾಕಬೇಕು ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗವು ಸುತ್ತೋಲೆ ಹೊರಡಿಸಿತ್ತು.

ADVERTISEMENT

ಈ ನಿರ್ಧಾರಕ್ಕೆ ದಲಿತ ಮತ್ತು ಇತರೆ ಹಿಂದುಳಿದ ವರ್ಗಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಈ ಆದೇಶದ ವಿರುದ್ಧ ಕೇಂದ್ರ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿತ್ತು. ನಂತರ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನೂ ಸುಪ್ರೀಂ ಕೋರ್ಟ್ ವಜಾ ಮಾಡಿತ್ತು.

ನೇಮಕಾತಿ ಆರಂಭಿಸಿ: ಮೀಸಲಾತಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿರುವುದರಿಂದ ತಕ್ಷಣವೇ ನೇಮಕಾತಿ ಪ್ರಕ್ರಿಯೆ ಆರಂಭಿಸುವಂತೆ ಯುಜಿಸಿ ಎಲ್ಲ ವಿಶ್ವವಿದ್ಯಾಲಯಗಳಿಗೆ ಪತ್ರ ಬರೆದಿದೆ.

ರಾಜ್ಯಕ್ಕೆ ಎರಡು ಕೇಂದ್ರೀಯ ವಿದ್ಯಾಲಯ

ಕರ್ನಾಟಕದಲ್ಲಿ 2 ಕೇಂದ್ರೀಯ ವಿದ್ಯಾಲಯಗಳನ್ನು ಆರಂಭಿಸಲು ಒಪ್ಪಿಗೆ ದೊರೆತಿದೆ. ಬೆಂಗಳೂರಿನ ಯಶವಂತಪುರ ಮತ್ತು ಬೆಳಗಾವಿಯ ಸದಲಗದಲ್ಲಿ ಒಂದೊಂದು ಕೇಂದ್ರೀಯ ವಿದ್ಯಾಲಯಗಳನ್ನುಆರಂಭಿಸಲಾಗುತ್ತದೆ.

ದೇಶದ ಹಲವೆಡೆ ನೂತನವಾಗಿ 50 ಕೇಂದ್ರೀಯ ವಿದ್ಯಾಲಯಗಳು ಆರಂಭವಾಗಲಿವೆ

*ದೇಶದ ಬೇರೆಬೇರೆ ವಿಶ್ವವಿದ್ಯಾಲಯಗಳಲ್ಲಿ ತೆರವಾಗಿರುವ 5,000ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಗೆ ಈ ಸುಗ್ರೀವಾಜ್ಞೆಯಿಂದ ನೆರವಾಗಲಿದೆ

- ಪ್ರಕಾಶ್ ಜಾವಡೇಕರ್, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.