ADVERTISEMENT

ಆಂಧ್ರದ ಮೂರು ರಾಜಧಾನಿ ವಿಚಾರದಲ್ಲಿ ಕೇಂದ್ರ ತನ್ನ ಪಾತ್ರ ನಿಭಾಯಿಸಲಿ: ಸಂಸದ

ಏಜೆನ್ಸೀಸ್
Published 15 ಸೆಪ್ಟೆಂಬರ್ 2020, 2:42 IST
Last Updated 15 ಸೆಪ್ಟೆಂಬರ್ 2020, 2:42 IST
ಟಿಡಿಪಿ ಸಂಸದ ಜಯದೇವ್‌ ಗಲ್ಲಾ
ಟಿಡಿಪಿ ಸಂಸದ ಜಯದೇವ್‌ ಗಲ್ಲಾ   

ನವದೆಹಲಿ: ಆಂಧ್ರ ಪ್ರದೇಶದಲ್ಲಿ ಮೂರು ರಾಜಧಾನಿಗಳನ್ನು ಆಯ್ಕೆ ಮಾಡುವ ವಿಚಾರದಲ್ಲಿ ಕೇಂದ್ರ ಸರ್ಕಾರವು ತನ್ನ ಪಾತ್ರವನ್ನು ನಿರ್ವಹಿಸಬೇಕು ಎಂದು ಟಿಡಿಪಿ ಸಂಸದ ಜಯದೇವ್‌ ಗಲ್ಲಾ ಅವರು ತಿಳಿಸಿದ್ದಾರೆ.

ಆಂಧ್ರ ಪ್ರದೇಶ ವಿರೋಧ ಪಕ್ಷ ತೆಲುಗು ದೇಶಂ (ಟಿಡಿಪಿ),ರಾಜಧಾನಿ ಆಯ್ಕೆ ವಿಚಾರವಾಗಿ ಚರ್ಚಿಸಲು ನಿಯೋಗದೊಂದಿಗೆ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್‌ ಕುಮಾರ್‌ ಭಲ್ಲಾ ಅವರನ್ನು ಭೇಟಿ ಮಾಡಿತು.

ಈ ವೇಳೆ ಮಾತನಾಡಿದ ಜಯದೇವ್‌ ಗಲ್ಲಾ, ‘ಆಂಧ್ರ ಪ್ರದೇಶದ ಮೂರು ರಾಜಧಾನಿಗಳ ವಿಚಾರವು ಸದ್ಯ ನ್ಯಾಯಾಲಯದಲ್ಲಿದೆ. ಈ ಬಗ್ಗೆ ಅಫಿಡವಿಟ್‌ ಸಲ್ಲಿಸಿರುವ ಕೇಂದ್ರ ಸರ್ಕಾರ ರಾಜಧಾನಿ ಆಯ್ಕೆ ವಿಚಾರದಲ್ಲಿ ತನ್ನ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದೆ. ರಾಜಧಾನಿ ಆಯ್ಕೆ ವಿಚಾರವು ರಾಜ್ಯ ಪಟ್ಟಿ, ಕೇಂದ್ರ ಪಟ್ಟಿ ಅಥವಾ ಸಹವರ್ತಿ ಪಟ್ಟಿಯಲ್ಲಿ ಇಲ್ಲ. ಈ ರೀತಿ ಯಾವುದೇ ಪಟ್ಟಿಯಲ್ಲಿಲ್ಲದ ವಿಚಾರದ ಶಾಸನವನ್ನು ರಚಿಸುವ ಅಧಿಕಾರ ಸಂಸತ್ತಿಗೆ ಇದೆ ಎಂದು ಸೆಕ್ಷನ್‌ 248 ತಿಳಿಸುತ್ತದೆ. ಆದ್ದರಿಂದ ಕೇಂದ್ರ ಸರ್ಕಾರವು ತನ್ನ ಪಾತ್ರ ನಿಭಾಯಿಸಬಹುದಾಗಿದೆ’ ಎಂದು ಹೇಳಿದ್ದಾರೆ.

ADVERTISEMENT

ಮುಖ್ಯಮಂತ್ರಿ ವೈ.ಎಸ್‌. ಜಗನ್‌ಮೋಹನ್‌ ರೆಡ್ಡಿ ನೇತೃತ್ವದ ಸರ್ಕಾರ ಮಂಡಿಸಿದ್ದ ‘ಮೂರು ರಾಜಧಾನಿಗಳ ಮಸೂದೆ’ಗೆ ರಾಜ್ಯಪಾಲ ವಿಶ್ವಭೂಷಣ್‌ ಹರಿಚಂದ್ರನ್‌ ಅವರುಜುಲೈ31 ರಂದು ಒಪ್ಪಿಗೆ ಸೂಚಿಸಿದ್ದರು. ಇದರನ್ವಯ ವಿಶಾಖಪಟ್ಟಣ, ಅಮರಾವತಿ ಮತ್ತು ಕರ್ನೂಲ್‌ ಕ್ರಮವಾಗಿ ಕಾರ್ಯಾಂಗ, ಶಾಸಕಾಂಗ ಹಾಗೂ ನ್ಯಾಯಾಂಗದ ರಾಜಧಾನಿಗಳಾಗಲಿವೆ. ಇದಲ್ಲದೆ ಆಡಳಿತ ವಲಯಗಳ ಮರು ವಿಂಗಡಣೆ ಮತ್ತು ಅಭಿವೃದ್ಧಿ ಮಂಡಳಿಗಳ ಸ್ಥಾಪನೆಗೂ ಕಾಯ್ದೆಯು ಅವಕಾಶ ನೀಡಲಿದೆ.

ಆದರೆ, ಈ ವಿಚಾರವೀಗ ಕೋರ್ಟ್‌ ಮೆಟ್ಟಿಲೇರಿದೆ.ಮುಂದಿನ ವಿಚಾರಣೆವರೆಗೆ ರಾಜ್ಯ ಸರ್ಕಾರವು ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದುಆಂಧ್ರ ಪ್ರದೇಶ ಹೈಕೋರ್ಟ್‌ ಆಗಸ್ಟ್‌ 14ರಂದು ಆದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.