ಧರ್ಮೇಂದ್ರ ಪ್ರಧಾನ್
–ಪಿಟಿಐ ಚಿತ್ರ
ನವದೆಹಲಿ: ‘ರಾಷ್ಟ್ರೀಯ ಶಿಕ್ಷಣ ನೀತಿಯನ್ನು(ಎನ್‌ಇಪಿ) ದೇಶದಾದ್ಯಂತ ಜಾರಿಗೊಳಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ’ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಸ್ಪಷ್ಟಪಡಿಸಿದರು.
ನವದೆಹಲಿಯಲ್ಲಿ ಸೋಮವಾರ ಪತ್ರಕರ್ತರ ಜತೆ ಮಾತನಾಡಿದ ಅವರು,‘ಎನ್‌ಇಪಿ ಹಾಗೂ ತ್ರಿಭಾಷಾ ಸೂತ್ರ ಜಾರಿ ವಿಚಾರವಾಗಿ, ತಮಿಳುನಾಡಿನ ಕೆಲವು ಸ್ನೇಹಿತರು ರಾಜಕೀಯ ಮಾಡುತ್ತಿದ್ದಾರೆ. ಹಿಂದಿ ಸೇರಿದಂತೆ ಯಾವುದೇ ಭಾಷೆಯನ್ನು ಯಾವ ರಾಜ್ಯದ ಮೇಲೂ ಹೇರುತ್ತಿಲ್ಲ. ಎನ್‌ಇಪಿ ಜಾರಿಗೆ ತರಲು ಕೇಂದ್ರ ಸರ್ಕಾರವು ಬದ್ಧವಾಗಿದೆ. ಆದರೆ, ಕೆಲವು ಷರತ್ತುಗಳಿವೆ’ ಎಂದು ತಿಳಿಸಿದರು.
‘ತ್ರಿಭಾಷಾ ಸೂತ್ರ ನೀತಿಯನ್ನು ಅಳವಡಿಸಿಕೊಳ್ಳುವ ತನಕ ರಾಜ್ಯದ ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಅನುದಾನ ನೀಡದೇ, ಕೇಂದ್ರ ಸರ್ಕಾರವು ಬ್ಲ್ಯಾಕ್‌ಮೇಲ್ ಮಾಡುತ್ತಿದೆ’ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟ್ಯಾಲಿನ್ ಆರೋಪಿಸಿದ್ದರು.
ಈ ಆರೋಪಕ್ಕೆ ಉತ್ತರಿಸಿದ ಅವರು, ‘ಎನ್‌ಇಪಿ ಎಂಬುದು ಹೊಸ ಮಹತ್ವಾಕಾಂಕ್ಷೆಯ ಸಾಮಾನ್ಯ ವೇದಿಕೆಯಾಗಿದೆ. ನಾನು ಎಲ್ಲ ಭಾಷೆಗಳನ್ನು ಗೌರವಿಸುತ್ತೇನೆ. ಮಾತೃಭಾಷೆಯಲ್ಲಿ ಶಿಕ್ಷಣ ನೀಡಬೇಕು ಎಂದು ಪ್ರಧಾನಿ ಮೋದಿ ಅವರ ಕನಸಿನಂತೆ ಎನ್‌ಇಪಿ ಜಾರಿಗೆ ತರಲಾಗುತ್ತಿದೆ. ನಮ್ಮ ಸಂಸ್ಕೃತಿಯಲ್ಲಿ ತಮಿಳು ಅತ್ಯಂತ ಪುರಾತನ ಭಾಷೆಯಾಗಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.