ADVERTISEMENT

ಡೊನಾಲ್ಡ್‌ ಟ್ರಂಪ್‌ ಕಾರ್ಯಕ್ರಮಕ್ಕೆ ₹ 85 ಕೋಟಿ ವೆಚ್ಚ

ರಸ್ತೆ ವಿಸ್ತರಣೆಗೆ ₹30 ಕೋಟಿ: ಭದ್ರತೆಗೆ 12 ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ

ರಾಯಿಟರ್ಸ್
Published 18 ಫೆಬ್ರುವರಿ 2020, 20:00 IST
Last Updated 18 ಫೆಬ್ರುವರಿ 2020, 20:00 IST
ಅಹಮದಾಬಾದ್‌ನ ಕೊಳೆಗೇರಿ ಪ್ರದೇಶದ ಉದ್ದಕ್ಕೂ ಗೋಡೆ ನಿರ್ಮಿಸಿರುವುದನ್ನು ವಿರೋಧಿಸಿ ಸಾಮಾಜಿಕ ಕಾರ್ಯಕರ್ತೆ ಅಶ್ವಥಿ ಜ್ವಾಲಾ ನೇತೃತ್ವದಲ್ಲಿ ನಡೆದ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿರುವ ಕೊಳೆಗೇರಿ ನಿವಾಸಿಗಳು – ರಾಯಿಟರ್ಸ್‌ ಚಿತ್ರ
ಅಹಮದಾಬಾದ್‌ನ ಕೊಳೆಗೇರಿ ಪ್ರದೇಶದ ಉದ್ದಕ್ಕೂ ಗೋಡೆ ನಿರ್ಮಿಸಿರುವುದನ್ನು ವಿರೋಧಿಸಿ ಸಾಮಾಜಿಕ ಕಾರ್ಯಕರ್ತೆ ಅಶ್ವಥಿ ಜ್ವಾಲಾ ನೇತೃತ್ವದಲ್ಲಿ ನಡೆದ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿರುವ ಕೊಳೆಗೇರಿ ನಿವಾಸಿಗಳು – ರಾಯಿಟರ್ಸ್‌ ಚಿತ್ರ   

ಅಹಮದಾಬಾದ್‌: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಅಹಮದಾಬಾದ್‌ ನಗರದಲ್ಲಿ ಮೂರು ಗಂಟೆಗಳ ಕಾಲ ಇರಲಿದ್ದಾರೆ. ಇದಕ್ಕಾಗಿ ಕೈಗೊಂಡಿರುವ ಸಿದ್ಧತೆಗಳಿಗಾಗಿ ಸರ್ಕಾರ ಮಾಡುತ್ತಿರುವ ಒಟ್ಟು ವೆಚ್ಚ ಬರೋಬ್ಬರಿ ₹80ರಿಂದ 85 ಕೋಟಿ.

ಟ್ರಂಪ್‌ ಅವರ ಪ್ರವಾಸದ ಬಗ್ಗೆ ಮಾಹಿತಿ ಹೊಂದಿರುವ ಸರ್ಕಾರಿ ಅಧಿಕಾರಿಗಳೇ ಈ ವಿಷಯ ತಿಳಿಸಿದ್ದಾರೆ. ಈ ಮೊತ್ತವು ಗುಜರಾತ್‌ನ ಗೃಹ ಸಚಿವಾಲಯದ ವಾರ್ಷಿಕ ಬಜೆಟ್‌ನ ಶೇಕಡ 1.5ರಷ್ಟು ಎಂದು ಹೇಳಿದ್ದಾರೆ.

‘ಟ್ರಂಪ್‌ ಮತ್ತು ಪ್ರಧಾನಿ ಮೋದಿ ಉದ್ಘಾಟಿಸಲಿರುವ ಹೊಸ ಕ್ರಿಕೆಟ್‌ ಕ್ರೀಡಾಂಗಣದ ಸುತ್ತಮುತ್ತಲಿನ ರಸ್ತೆಗಳ ವಿಸ್ತರಣೆ ಮತ್ತು ಮೂಲಸೌಕರ್ಯಗಳ ಸುಧಾರಣೆಗೆ ಸುಮಾರು ₹30 ಕೋಟಿ ವೆಚ್ಚ ಮಾಡಲಾಗಿದೆ. ನಗರದ ಸೌಂದರೀಕರಣಕ್ಕೆ ₹6 ಕೋಟಿ ವೆಚ್ಚ ಮಾಡಲಾಗಿದೆ’ ಎಂದು ಅಹಮದಾಬಾದ್‌ ಮಹಾನಗರ ಪಾಲಿಕೆ ಆಯುಕ್ತ ವಿಜಯ್‌ ನೇಹ್ರಾ ತಿಳಿಸಿದ್ದಾರೆ.

ADVERTISEMENT

ಬಿಗಿ ಭದ್ರತೆ: ಭದ್ರತೆಗೆ ಅಪಾರ ವೆಚ್ಚವಾಗಲಿದೆ. ಸುಮಾರು 12 ಸಾವಿರಕ್ಕೂ ಹೆಚ್ಚು ಪೊಲೀಸ್‌ ಅಧಿಕಾರಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ.

ವಿಮಾನ ನಿಲ್ದಾಣದ ವೃತ್ತದ ಬಳಿ ಇದ್ದ ಮೂರು ಪಾನ್‌ ಶಾಪ್‌ಗಳನ್ನು ಸಹ ಪಾಲಿಕೆ ಅಧಿಕಾರಿಗಳು ಮುಚ್ಚಿಸಿದ್ದಾರೆ.

ಟ್ರಂಪ್‌ ತೆರಳುವ ಮಾರ್ಗದಲ್ಲಿನ ಕೊಳೆಗೇರಿ ಪ್ರದೇಶವು ಕಾಣಿಸದಂತೆ 400 ಮೀಟರ್‌ ಉದ್ದದ ಗೋಡೆಯನ್ನು ಈಗಾಗಲೇ ನಿರ್ಮಿಸಲಾಗಿದೆ. ಇಲ್ಲಿನ ನಿವಾಸಿಗಳು ಗೋಡೆ ನಿರ್ಮಾಣಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎರಡು ದಿನಕ್ಕೊಮ್ಮೆ ಈ ಪ್ರದೇಶಕ್ಕೆ ನೀರು ಪೂರೈಸಲಾಗುತ್ತಿದೆ. ಇಲ್ಲಿನ ಕೆಲವು ಮನೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಆದರೆ, ನೀರು ಪೂರೈಕೆಯಾಗುವುದಿಲ್ಲ. ಹೀಗಾಗಿ, ಸಾರ್ವಜನಿಕ ಶೌಚಾಲಯಗಳಿಗೆ ಹೋಗುವುದು ಅನಿವಾರ್ಯವಾಗಿದೆ ಎಂದು ತಿಳಿಸಿದ್ದಾರೆ.

‘ಸರ್ಕಾರ ಕೊಳೆಗೇರಿಗೆ ಅಡ್ಡವಾಗಿ ಗೋಡೆ ನಿರ್ಮಿಸುವ ಬದಲು ನಮ್ಮ ಮನೆಗಳಿಗೆ ನೀರು ಪೂರೈಕೆಗೆ ಕ್ರಮಕೈಗೊಳ್ಳಬೇಕಾಗಿತ್ತು’ ಎಂದು ಇಲ್ಲಿನ ನಿವಾಸಿ ಮನುಬೇನ್‌ ಸರಣಿಯಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.