ADVERTISEMENT

ಜಮ್ಮು–ಕಾಶ್ಮೀರ: ಭೂಖರೀದಿಗೆ ಅನುವು ಮಾಡಲು ಕಾನೂನು ತಿದ್ದುಪಡಿ

ಪಿಟಿಐ
Published 27 ಅಕ್ಟೋಬರ್ 2020, 11:37 IST
Last Updated 27 ಅಕ್ಟೋಬರ್ 2020, 11:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶ್ರೀನಗರ: ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಲ್ಲಿ ಹೊರರಾಜ್ಯದವರು ಭೂಖರೀದಿಸಲು ಅನುವಾಗುವಂತೆ ಹಲವು ಕಾನೂನುಗಳ ತಿದ್ದುಪಡಿಯನ್ನು ಕೇಂದ್ರ ಸರ್ಕಾರ ತಂದಿದೆ.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷಾಧಿಕಾರ ರದ್ದುಗೊಳಿಸಿ ವರ್ಷ ಕಳೆದ ಬಳಿಕ ಈ ತಿದ್ದುಪಡಿಗಳನ್ನು ತರಲಾಗಿದೆ. ಕೇಂದ್ರಾಡಳಿತ ಪ್ರದೇಶದಲ್ಲಿ ಭೂಖರೀದಿಸಲು ಇರುವ, ಜಮ್ಮು ಮತ್ತು ಕಾಶ್ಮೀರ ಅಭಿವೃದ್ಧಿ ಕಾಯ್ದೆಯ ಸೆಕ್ಷನ್‌ 17ರಿಂದ ‘ರಾಜ್ಯದ ಶಾಶ್ವತ ನಿವಾಸಿ’ ಎನ್ನುವುದನ್ನು ಕೈಬಿಡಲಾಗಿದೆ.

ವಿಶೇಷಾಧಿಕಾರ ರದ್ದುಗೊಳಿಸುವ ಮೊದಲು, ಜಮ್ಮು ಮತ್ತು ಕಾಶ್ಮೀರದ ನಿವಾಸಿಗಳಾಗಿರದವರು ಈ ಭಾಗದಲ್ಲಿ ಸ್ಥಿರಾಸ್ತಿಯನ್ನು ಖರೀದಿಸಲು ಸಾಧ್ಯವಾಗುತ್ತಿರಲಿಲ್ಲ. ಈ ತಿದ್ದುಪಡಿಯಿಂದಾಗಿ ಹೊರ ರಾಜ್ಯದವರಿಗೂ ಭೂಖರೀದಿಗೆ ಅವಕಾಶ ದೊರೆಯಲಿದೆ.

ADVERTISEMENT

‘ಕಾಯ್ದೆಯಲ್ಲಿ ಹಲವು ವಿನಾಯಿತಿಗಳಿದ್ದು, ಕೃಷಿ ಭೂಮಿಯನ್ನು ಶಿಕ್ಷಣ ಸಂಸ್ಥೆ, ಆಸ್ಪತ್ರೆ ಸೇರಿದಂತೆ ಕೃಷಿಯೇತರ ಚಟುವಟಿಕೆಗಳಿಗೂ ವರ್ಗಾಯಿಸಬಹುದಾಗಿದೆ’ ಎಂದು ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ತಿಳಿಸಿದರು.

ವಿರೋಧ: ಕಾಯ್ದೆಗೆ ತಂದಿರುವ ತಿದ್ದುಪಡಿಗಳನ್ನು ನ್ಯಾಷನಲ್‌ ಕಾನ್ಫರೆನ್ಸ್‌ ಪಕ್ಷದ ನಾಯಕ ಒಮರ್‌ ಅಬ್ದುಲ್ಲಾ ವಿರೋಧಿಸಿದ್ದಾರೆ. ‘ಜಮ್ಮು ಮತ್ತು ಕಾಶ್ಮೀರದಲ್ಲಿ ಭೂಮಾಲೀಕತ್ವ ಕಾನೂನಿಗೆ ತಂದಿರುವ ತಿದ್ದುಪಡಿಗಳು ಒಪ್ಪುವಂತದ್ದಲ್ಲ. ಜಮ್ಮು ಮತ್ತು ಕಾಶ್ಮೀರ ಇದೀಗ ಮಾರಾಟಕ್ಕಿದೆ. ಇದರಿಂದಾಗಿ ಕಡಿಮೆ ಭೂಮಿ ಹೊಂದಿರುವ ಬಡವರು ಸಂಕಷ್ಟ ಅನುಭವಿಸಲಿದ್ದಾರೆ’ ಎಂದು ಟ್ವೀಟ್‌ ಮೂಲಕ ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.