ನವದೆಹಲಿ: ಪ್ರಧಾನಮಂತ್ರಿ ಅನ್ನದಾತ ಆಯ್ ಸಂರಕ್ಷಣಾ ಅಭಿಯಾನ (ಪಿಎಂ– ಆಶಾ) ಯೋಜನೆಯನ್ನು 2025–26ನೇ ಸಾಲಿನಲ್ಲೂ ಮುಂದುವರಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
ಈ ಯೋಜನೆಯು ಖರೀದಿ ಪ್ರಕ್ರಿಯೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಗುರಿ ಹೊಂದಿದ್ದು, ರೈತರಿಗೆ ಲಾಭದಾಯಕ ಬೆಲೆಗಳನ್ನು ಒದಗಿಸಲು ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಳಿತವನ್ನು ನಿಯಂತ್ರಿಸಲು ನಿರ್ಣಾಯಕವಾಗಿದೆ ಎಂದಿದೆ.
ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ತೊಗರಿ, ಉದ್ದು ಖರೀದಿಗೂ ಕೇಂದ್ರ ಸರ್ಕಾರ ಅನುಮತಿ ನೀಡಿದೆ.
ಆಂಧ್ರಪ್ರದೇಶ, ಛತ್ತೀಸಗಢ, ಗುಜರಾತ್, ಹರಿಯಾಣ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ತೆಲಂಗಾಣ ಮತ್ತು ಉತ್ತರ ಪ್ರದೇಶದಲ್ಲಿ 13.22 ಲಕ್ಷ ಟನ್ ತೊಗರಿ ಖರೀದಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.
ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ತೆಲಂಗಾಣದಲ್ಲಿ ಫೆ.15ರವರೆಗೆ 15 ಲಕ್ಷ ಟನ್ ತೊಗರಿ ಖರೀದಿಸಿದ್ದು, ಈ ರಾಜ್ಯಗಳ 12,006 ರೈತರಿಗೆ ಅನುಕೂಲವಾಗಿದೆ ಎಂದಿರುವ ಚೌಹಾಣ್, ಇತರ ರಾಜ್ಯಗಳಲ್ಲೂ ಶೀಘ್ರದಲ್ಲೇ ಖರೀದಿ ಆರಂಭವಾಗಲಿದೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.