ADVERTISEMENT

ಕೋವಿಡ್ ಲಸಿಕೆ ನೀಡುವಿಕೆಯಲ್ಲಿ ಖಾಸಗಿ ಕೇಂದ್ರಗಳ ವೇಗ ಸಾಲದು: ರಾಜೇಶ್‌ ಭೂಷಣ್‌

ಕೇಂದ್ರ ಆರೋಗ್ಯ ಸಚಿವಾಲಯ ಕಾರ್ಯದರ್ಶಿ ಕಳವಳ

ಪಿಟಿಐ
Published 14 ಜುಲೈ 2021, 12:58 IST
Last Updated 14 ಜುಲೈ 2021, 12:58 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಹಲವು ರಾಜ್ಯಗಳಲ್ಲಿನ ‘ಕೋವಿಡ್‌ ಲಸಿಕೆ ನೀಡುವ ಖಾಸಗಿ ಕೇಂದ್ರ’ಗಳು (ಪಿಸಿವಿಸಿ) ಅಗತ್ಯ ಪ್ರಮಾಣದಷ್ಟು ಲಸಿಕೆಯ ಡೋಸ್‌ಗಳನ್ನು ಪೂರೈಸುವಂತೆ ಕಂಪನಿಗಳಿಗೆ ಬೇಡಿಕೆಯನ್ನೇ ಸಲ್ಲಿಸಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ಕಳವಳ ವ್ಯಕ್ತಪಡಿಸಿದೆ.

ಖಾಸಗಿ ಕೇಂದ್ರಗಳ ಇಂಥ ಧೋರಣೆಯಿಂದಾಗಿ ಲಸಿಕೆ ಕಾರ್ಯಕ್ರಮಕ್ಕೆ ನಿರೀಕ್ಷಿತ ವೇಗ ಸಿಗುತ್ತಿಲ್ಲ. ಖಾಸಗಿ ಕೇಂದ್ರಗಳಿಗೆ ಸುಲಭವಾಗಿ ಲಸಿಕೆ ದೊರೆಯುವಂತಾದರೆ ಈ ಕಾರ್ಯಕ್ರಮಕ್ಕೆ ವೇಗ ಸಿಗುವುದು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಎಂದು ಸಚಿವಾಲಯದ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ಹೇಳಿದರು.

ಕರ್ನಾಟಕ ಸೇರಿದಂತೆ 15 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಇಲಾಖೆ ಕಾರ್ಯದರ್ಶಿಗಳು ಹಾಗೂ ಲಸಿಕೆ ಕಾರ್ಯಕ್ರಮದ ಹಿರಿಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ADVERTISEMENT

‘ಒಂದೆಡೆ ಲಸಿಕೆ ಪೂರೈಕೆಗೆ ಸಮರ್ಪಕ ಬೇಡಿಕೆ ಸಲ್ಲಿಸಲಾಗುತ್ತಿಲ್ಲ. ಪೂರೈಕೆಯಾದ ಲಸಿಕೆಯ ಎತ್ತುವಳಿ ಆಗುತ್ತಿಲ್ಲ. ಮತ್ತೊಂದೆಡೆ ಈ ಮೊದಲು ಪಡೆದ ಲಸಿಕೆಗೆ ಸಂಬಂಧಿಸಿದ ಬಿಲ್‌ ಮೊತ್ತವನ್ನು ಪಾವತಿಸದಿರುವುದು ಕಳವಳಕಾರಿ’ ಎಂದು ಹೇಳಿದರು.

‘ಲಸಿಕೆ ನೀಡುವ ಕಾರ್ಯಕ್ರಮದ ಪ್ರಗತಿಯನ್ನು ಪ್ರತಿ ದಿನ ಪರಿಶೀಲಿಸಬೇಕು. ಅಗತ್ಯವಿರುವ ಡೋಸ್‌ಗಳಿಗಾಗಿ ಲಸಿಕೆ ಉತ್ಪಾದನಾ ಕಂಪನಿಗಳಿಗೆ ತತ್‌ಕ್ಷಣವೇ ಬೇಡಿಕೆ ಸಲ್ಲಿಸುವುದನ್ನು ಖಾತರಿಪಡಿಸಿಕೊಳ್ಳಬೇಕು’ ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.

‘ಕೆಲವು ರಾಜ್ಯಗಳಲ್ಲಿ ಖಾಸಗಿ ಕೇಂದ್ರಗಳು ತಮಗೆ ಪೂರೈಕೆಯಾದ ಲಸಿಕೆಯನ್ನು ಎತ್ತುವಳಿ ಮಾಡಿವೆ. ಆದರೆ, ತಾವು ಪಡೆದಿರುವುಕ್ಕಿಂತ ಕಡಿಮೆ ಡೋಸ್‌ಗಳನ್ನು ನೀಡಿರುವುದು ಕಂಡು ಬಂದಿದೆ’ ಎಂದೂ ಅಸಮಾಧಾನ ವ್ಯಕ್ತಪಡಿಸಿದರು.

ಲಸಿಕೆ ತಯಾರಿಸುವ ಕಂಪನಿಗಳಾದ ಭಾರತ್‌ ಬಯೋಟೆಕ್‌ ಹಾಗೂ ಸೀರಂ ಇನ್ಸ್‌ಟಿಟ್ಯೂಟ್‌ ಆಫ್‌ ಇಂಡಿಯಾದ ಪ್ರತಿನಿಧಿಗಳು ಸಹ ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.