ADVERTISEMENT

ಸುಗಮ ಲಸಿಕಾ ಕಾರ್ಯಕ್ರಮಕ್ಕಾಗಿ ಸಮಿತಿಗಳನ್ನು ರಚಿಸಲು ರಾಜ್ಯಗಳಿಗೆ ಕೇಂದ್ರದ ಸೂಚನೆ

ಪಿಟಿಐ
Published 30 ಅಕ್ಟೋಬರ್ 2020, 12:10 IST
Last Updated 30 ಅಕ್ಟೋಬರ್ 2020, 12:10 IST
ಶೀತಜ್ವರಕ್ಕೆ ಮೆಕ್ಸಿಕೊ ನಗರದಲ್ಲಿ ನಡೆಯುತ್ತಿದ್ದ ಉಚಿತ ಲಸಿಕಾ ಕಾರ್ಯಕ್ರಮ (ರಾಯಿಟರ್ಸ್‌ ಚಿತ್ರ)
ಶೀತಜ್ವರಕ್ಕೆ ಮೆಕ್ಸಿಕೊ ನಗರದಲ್ಲಿ ನಡೆಯುತ್ತಿದ್ದ ಉಚಿತ ಲಸಿಕಾ ಕಾರ್ಯಕ್ರಮ (ರಾಯಿಟರ್ಸ್‌ ಚಿತ್ರ)   

ನವದೆಹಲಿ: ಕೋವಿಡ್‌-19 ಲಸಿಕೆಯ ವಿತರಣೆ ಮತ್ತು ಮೇಲ್ವಿಚಾರಣೆಗಾಗಿ ರಾಜ್ಯ, ಜಿಲ್ಲೆ ಹಂತದಲ್ಲಿ ಸಮಿತಿಗಳನ್ನು ರಚಿಸುವಂತೆ ಕೇಂದ್ರ ಸರ್ಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಶುಕ್ರವಾರ ಸೂಚನೆ ನೀಡಿದೆ.

ಇದರ ಜೊತೆಗೆ, ಎಂದಿನ ಆರೋಗ್ಯ ಸೇವೆಗಳಿಗೆ ಹೆಚ್ಚಿನ ಸಮಸ್ಯೆ ಉಂಟಾಗದೇ ಇರುವುದನ್ನು ಖಚಿತಪಡಿಸಿಕೊಳ್ಳುವಂತೆಯೂ, ವ್ಯಾಕ್ಸಿನ್‌ ಕುರಿತು ವದಂತಿ ಹರಿದಾಡದಿರಲು ಸಾಮಾಜಿಕ ತಾಣಗಳ ಮೇಲೆ ನಿಗಾ ವಹಿಸುವಂತೆಯೂ ಕೇಂದ್ರ ಸರ್ಕಾರ ಸಲಹೆ ನೀಡಿದೆ.

ಮೊದಲಿಗೆ ಆರೋಗ್ಯ ಸೇವೆಯಲ್ಲಿ ತೊಡಗಿರುವವರಿಗೆ ಆರಂಭಿಸಿ, ನಂತರ ಸಮಾಜದ ಎಲ್ಲ ಗುಂಪುಗಳಿಗೂ ಕೋವಿಡ್-19 ಲಸಿಕೆಯನ್ನು ನೀಡುವುದಾಗಿ ಆರೋಗ್ಯ ಸಚಿವಾಲಯ ಹೇಳಿದೆ. ಇದಕ್ಕಾಗಿ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಸಮಿತಿಗಳನ್ನು ರಚಿಸುವಂತೆ ಕೇಂದ್ರವು ತಿಳಿಸಿದೆ. ಈ ಸಮಿತಿಗಳು ಲಸಿಕೆ ವಿತರಣೆಯ ಪೂರ್ವಸಿದ್ಧತೆಗಳನ್ನು, ಸಂಬಂಧಿಸಿದ ಚಟುವಟಿಕೆಗಳನ್ನು, ಕಾರ್ಯಾಚರಣೆ, ಯೋಜನೆ, ಭೌಗೋಳಿಕ ಭೂಪ್ರದೇಶ ಮತ್ತು ತಲುಪಲು ಕಷ್ಟವೆನಿಸುವ ಪ್ರದೇಶಗಳಿಗೂ ಲಸಿಕೆಯನ್ನು ತಲುಪಿಸುವ ಜವಾಬ್ದಾರಿ ವಹಿಸಬೇಕು ಎಂದು ತಿಳಿಸಲಾಗಿದೆ.

ADVERTISEMENT

ಈ ಕುರಿತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿರುವ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ಕೆಲ ಸಲಹೆಗಳನ್ನು ನೀಡಿದ್ದಾರೆ. ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ರಾಜ್ಯದ ಪ್ರಧಾನ ಸಮಿತಿ (ಎಸ್‌ಎಸ್‌ಸಿ), ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಥವಾ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ನೇತೃತ್ವದ ರಾಜ್ಯ ಕಾರ್ಯಪಡೆ (ಎಸ್‌ಟಿಎಫ್) ಸ್ಥಾಪಿಸಲು ಪತ್ರದಲ್ಲಿ ಹೇಳಲಾಗಿದೆ. ಜಿಲ್ಲಾಧಿಕಾರಿಯ ನೇತೃತ್ವದಲ್ಲಿ ಜಿಲ್ಲಾ ಕಾರ್ಯಪಡೆ (ಡಿಟಿಎಫ್) ರಚನೆ ಮಾಡಲೂ ತಿಳಿಸಲಾಗಿದೆ.

ಕೇಂದ್ರ ಆರೋಗ್ಯ ಕಾರ್ಯದರ್ಶಿ ಬರೆದಿರುವ ಪತ್ರದೊಂದಿಗೆ ಮತ್ತೊಂದು ಪತ್ರವನ್ನೂ ಲಗತ್ತಿಸಲಾಗಿದೆ. ಅದರಲ್ಲಿ ಸಮಿತಿಯ ಕಾರ್ಯಗಳನ್ನು ವಿವರಿಸಲಾಗಿದೆ. ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯ ರಾಜ್ಯದ ಪ್ರಧಾನ ಸಮಿತಿ (ಎಸ್‌ಎಸ್‌ಸಿ) ಸಂಬಂಧಪಟ್ಟ ಎಲ್ಲಾ ಇಲಾಖೆಗಳು ಲಸಿಕೆ ವಿತರಣೆ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದನ್ನು ಖಚಿತಪಡಿಸಿಕೊಳ್ಳಬೇಕು. ಸಮುದಾಯದ ಭಾಗವಹಿಸುವಿಕೆಗಾಗಿ ಕಾರ್ಯತಂತ್ರ ರೂಪಿಸಬೇಕು ಎಂದು ತಿಳಿಸಲಾಗಿದೆ.

ಕೋವಿಡ್‌-19 ಲಸಿಕೆಯ ಸುತ್ತ ಹರಡಬಹುದಾದ ವದಂತಿಗಳನ್ನು ತಪ್ಪಿಸುವ ಸಲುವಾಗಿ ಸಾಮಾಜಿಕ ಮಾಧ್ಯಮಗಳ ಮೇಲೆ ಆರಂಭದಿಂದಲೇ ಗಮನ ಇಡಬೇಕು. ಉತ್ತಮವಾಗಿ ಕಾರ್ಯನಿರ್ವಹಿಸುವ ಜಿಲ್ಲೆ / ಬ್ಲಾಕ್ / ನಗರ ವಾರ್ಡ್ ಇತ್ಯಾದಿಗಳ ಸಾಧನೆಗಾಗಿ ಎಸ್‌ಎಸ್‌ಸಿ ಪ್ರಶಸ್ತಿ / ಗೌರವಿಸುವಿಕೆ ವ್ಯವಸ್ಥೆಯನ್ನು ಸ್ಥಾಪಿಸಬೇಕು ಎಂದು ಸಲಹೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.