ADVERTISEMENT

ಅಯೋಧ್ಯೆ ತೀರ್ಪು ಪ್ರಕಟ ಹಿನ್ನೆಲೆ ಭದ್ರತೆಗೆ 4000 ಅರೆಸೇನಾ ಪಡೆ ಸಿಬ್ಬಂದಿ

ಏಜೆನ್ಸೀಸ್
Published 5 ನವೆಂಬರ್ 2019, 9:08 IST
Last Updated 5 ನವೆಂಬರ್ 2019, 9:08 IST
   

ನವದೆಹಲಿ: ಬಹುನಿರೀಕ್ಷಿತ ರಾಮ ಜನ್ಮಭೂಮಿ - ಬಾಬ್ರಿ ಮಸೀದಿ ಪ್ರಕರಣದ ತೀರ್ಪು ಪ್ರಕಟಗೊಳ್ಳುವ ವೇಳೆ ಮತ್ತು ಬಳಿಕ ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಕೇಂದ್ರ ಸರ್ಕಾರವು ಹೆಚ್ಚುವರಿಯಾಗಿ ಸುಮಾರು 4000 ಸಾವಿರ ಅರೆಸೇನಾ ಪಡೆ ಸಿಬ್ಬಂದಿಯನ್ನು ನೀಡಿದೆ.

ತೀರ್ಪು ಹೊರಬಂದ ಬಳಿಕ ಕಾನೂನು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ಸೋಮವಾರ ಈ ನಿರ್ಧಾರವನ್ನು ಕೈಗೊಂಡಿದೆ. ಹೀಗಾಗಿ ಅರೆಸೇನಾಪಡೆಯ 15 ತಂಡಗಳನ್ನು ಶೀಘ್ರವೇ ಉತ್ತರ ಪ್ರದೇಶಕ್ಕೆ ಕಳುಹಿಸುತ್ತಿದ್ದು ನವೆಂಬರ್ 18ರವರೆಗೆ ಇರುವಂತೆ ಹೇಳಿದೆ ಎಂದು ಸುದ್ದಿಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಬಿಎಸ್‌ಎಫ್‌, ಆರ್‌ಎಎಫ್, ಸಿಐಎಸ್‌ಎಫ್, ಐಟಿಬಿಪಿ ಮತ್ತು ಎಸ್‌ಎಸ್‌ಬಿಗಳಿಂದ 15 ತಂಡಗಳನ್ನು ಕಳುಹಿಸಲಿದೆ. ಕೇಂದ್ರದ ಮೀಸಲು ಪೊಲೀಸ್ ಪಡೆ(ಸಿಎಪಿಎಫ್)ಯ ಒಟ್ಟು 15 ತಂಡಗಳು ನವೆಂಬರ್ 11ರಂದು ಉತ್ತರ ಪ್ರದೇಶ ತಲುಪಲಿವೆ.

ADVERTISEMENT

ಇದಲ್ಲದೆ ಈಗಾಗಲೇ ಉತ್ತರ ಪ್ರದೇಶದಲ್ಲಿ ನಿಯೋಜನೆಗೊಂಡಿರುವ ಕ್ಷಿಪ್ರ ಕಾರ್ಯ ಪಡೆ(ಆರ್‌ಎಎಫ್‌)ಯ 16 ತಂಡಗಳು ನವೆಂಬರ್ 18ರವರೆಗೂ ಅಲ್ಲಿಯೇ ಇರುವಂತೆ ಅವಧಿಯನ್ನು ಕೇಂದ್ರ ಸರ್ಕಾರ ವಿಸ್ತರಿಸಿದೆ.

ಆರ್‌ಎಎಫ್‌ನ 16 ತಂಡಗಳು ಮತ್ತು ಸಿಐಎಸ್‌ಎಫ್, ಐಟಿಬಿಪಿ, ಎಸ್‌ಎಸ್‌ಬಿ ಮತ್ತು ಬಿಎಸ್‌ಎಫ್‌ಗಳಿಂದ ತಲಾ ಒಂದೊಂದರಂತೆ ಆರು ತಂಡಗಳು ಸೇರಿ ಒಟ್ಟಾರೆ 40 ಪಡೆಗಳನ್ನು ನವೆಂಬರ್ 18ರವರೆಗೆ ನಿಯೋಜಿಸಲಾಗುತ್ತದೆ. ವಾರಾಣಸಿ ಮತ್ತುಅಯೋಧ್ಯೆ ಒಳಗೊಂಡಂತೆ ರಾಜ್ಯದ 12 ಸೂಕ್ಷ್ಮ ಜಿಲ್ಲೆಗಳಾದ ಕಾನ್ಪುರ, ಆಲಿಗಢ, ಲಖನೌ, ಅಜಾಮ್‌ಗಢ ಸೇರಿದಂತೆ ಹಲವೆಡೆ ತೀರ್ಪು ಪ್ರಕಟಗೊಂಡ ಮತ್ತು ಬಳಿಕ ಕಾನೂನು ಸುವ್ಯವಸ್ಥೆ ಕಾಪಾಡಲು ನಿಯೋಜಿಸಲಾಗುತ್ತದೆ ಎಂದು ಅಧಿಕೃತ ಮೂಲಗಳು ಹೇಳಿವೆ.

ದಶಕಗಳಿಗೂ ಹಳೆಯದಾದ ರಾಮ ಜನ್ಮಭೂಮಿ- ಬಾಬ್ರಿ ಮಸೀದಿ ಜಮೀನು ವಿವಾದಕ್ಕೆ ಸಂಬಂಧಿಸಿದ ತೀರ್ಪನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರ ನಿವೃತ್ತಿಯ ನವೆಂಬರ್ 17ಕ್ಕೂ ಮುನ್ನವೇ ಪ್ರಕಟಿಸುವ ನಿರೀಕ್ಷೆಯನ್ನು ಹೊಂದಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.