ADVERTISEMENT

ಕೆಲವು ರಾಜ್ಯಗಳಲ್ಲಿ ಕೋವಿಡ್‌ ಪಾಸಿಟಿವಿಟಿ ದರ ಏರಿಕೆ: ಕೇಂದ್ರ ಕಳವಳ

ಪಿಟಿಐ
Published 11 ಮಾರ್ಚ್ 2023, 12:46 IST
Last Updated 11 ಮಾರ್ಚ್ 2023, 12:46 IST
.
.   

ನವದೆಹಲಿ: ಎಚ್‌3ಎನ್‌2 ಸೋಂಕು ವ್ಯಾಪಿಸುತ್ತಿರುವ ನಡುವೆಯೇ ಕೆಲವು ರಾಜ್ಯಗಳಲ್ಲಿ ಕೋವಿಡ್‌ ಪಾಸಿಟಿವಿಟಿ ದರ ನಿರಂತರವಾಗಿ ಏರಿಕೆಯಾಗುತ್ತಿರುವ ಬಗ್ಗೆ ಕೇಂದ್ರ ಸರ್ಕಾರ ಶನಿವಾರ ಕಳವಳ ವ್ಯಕ್ತಪಡಿಸಿದೆ.

ಈ ಬಗ್ಗೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ಅವರು ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದ್ದಾರೆ.

‘ಕಳೆದ ಕೆಲವು ತಿಂಗಳಿನಿಂದ ಕೋವಿಡ್‌ ಸೋಂಕು ಪ್ರಮಾಣ ಇಳಿಕೆಯಾಗಿತ್ತು. ಆದರೆ ಇತ್ತೀಚೆಗೆ ಕೆಲವು ರಾಜ್ಯಗಳಲ್ಲಿ ಪಾಸಿಟಿವಿಟಿ ದರ ಆತಂಕಕಾರಿಯಾಗಿ ಏರುತ್ತಿದೆ. ಈ ಬಗ್ಗೆ ಪ್ರಮಾಣಿಕವಾಗಿ ಕ್ರಮಕೈಗೊಳ್ಳಬೇಕಾದ ತುರ್ತು ಇದೆ’ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಮಾರ್ಗಸೂಚಿ ಪಾಲನೆಗೆ ಮನವಿ ಮಾಡಿರುವ ಅವರು, ಆಸ್ಪತ್ರೆಗಳಲ್ಲಿ ಔಷಧ, ವೈದ್ಯಕೀಯ ಆಮ್ಲಜನಕ, ಕೋವಿಡ್‌ ಮತ್ತು ಇತರ ಸೋಂಕುಗಳ ವಿರುದ್ಧ ನೀಡುವ ಲಸಿಕೆಗಳನ್ನು ಸಿದ್ಧವಾಗಿಟ್ಟುಕೊಳ್ಳುವಂತೆ ಸೂಚಿಸಿದ್ದಾರೆ.

‘ಹೊಸ ಕೋವಿಡ್‌ ಪ್ರಕರಣಗಳು, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆ ಇದೆ. ಆದಾಗ್ಯೂ ಕೊರೊನಾ ವಿರುದ್ಧ ಎಚ್ಚರಿಕೆಯಿಂದ ಇರಬೇಕಾದ ಅಗತ್ಯವಿದೆ. ಪರೀಕ್ಷೆ, ಸೋಂಕು ಪತ್ತೆ, ಚಿಕಿತ್ಸೆ, ಲಸಿಕೆ ಮತ್ತು ಕೋವಿಡ್‌ ಮಾರ್ಗಸೂಚಿಗಳನ್ನು ಪಾಲನೆ ಬಗ್ಗೆ ಗಮನಹರಿಸಬೇಕಿದೆ’ ಎಂದು ಅವರು ತಿಳಿಸಿದ್ದಾರೆ.

‘ಹಲವೆಡೆ ಎಚ್‌3ಎನ್‌2 ಸೋಂಕು ಪತ್ತೆಯಾಗುತ್ತಿದೆ. ಈ ಸೋಂಕು ಮಕ್ಕಳು, ವಯಸ್ಸಾದವರು ಮತ್ತು ಹಲವು ಕಾಯಿಲೆಗಳಿಂದ ಬಳಲುತ್ತಿರುವರಿಗೆ ಹೆಚ್ಚು ಅಪಾಯಕಾರಿ ಎಂಬುದು ಗಮನದಲ್ಲಿರಲಿ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.