ಶ್ರೀನಗರ: ‘ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯು ಜಮ್ಮು–ಕಾಶ್ಮೀರದ ಅಭಿವೃದ್ಧಿ ಹಾಗೂ ಆಡಳಿತ ಪ್ರಕ್ರಿಯೆ ಮೇಲೆ ಪ್ರತಿಕೂಲ ಪರಿಣಾಮ ಬೀರದಂತೆ ಖಚಿತಪಡಿಸಿಕೊಳ್ಳುವುದಾಗಿ ಕೇಂದ್ರ ಸರ್ಕಾರ ಹೇಳಿದೆ’ ಎಂದು ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸೋಮವಾರ ಹೇಳಿದ್ದಾರೆ.
ಆಡಳಿತಾಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದ ಒಮರ್, ಪಹಲ್ಗಾಮ್ ದಾಳಿಯು ಕೇಂದ್ರಾಡಳಿತ ಪ್ರದೇಶದ ಪ್ರವಾಸೋದ್ಯಮದ ಮೇಲೆ ಪ್ರತಿಕೂಲ ಪರಿಣಾಮ ಬೀರಿರುವುದನ್ನು ಒಪ್ಪಿಕೊಂಡಿದ್ದಾರೆ. ಇದೇ ವೇಳೆ, ಇತ್ತೀಚೆಗೆ ತಾವು ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದ ಬಗ್ಗೆ ಮಾಹಿತಿ ನೀಡಿದ್ದಾರೆ.
ಪ್ರವಾಸೋದ್ಯಮ ಹಾಗೂ ಆಡಳಿತ ಪ್ರಕ್ರಿಯೆಗೆ ತೊಡಕಾಗದಂತೆ ನೋಡಿಕೊಳ್ಳುವುದಾಗಿ ಕೇಂದ್ರ ಭರವಸೆ ನೀಡಿದೆ. ಆದರೆ, ಅದನ್ನು ಕಾಪಾಡಿಕೊಳ್ಳುವುದು ನಮ್ಮ ಜವಾಬ್ದಾರಿ ಎಂದು ಒಮರ್ ಹೇಳಿದ್ದಾರೆ. ಜತೆಗೆ ಯಾವುದೇ ಅಡತಡೆ ಇಲ್ಲದೆ ಅಮರನಾಥ ಯಾತ್ರೆ ಯಶಸ್ವಿಗೊಳಿಸಲು ಸಾಮೂಹಿಕ ಪ್ರಯತ್ನ ಬೇಕಿದೆ. ನಮ್ಮ ಆಡಳಿತದ ವ್ಯಾಪ್ತಿಯ ಜವಾಬ್ದಾರಿಗಳನ್ನು ಸಂಪೂರ್ಣವಾಗಿ ನಿರ್ವಹಿಸೋಣ ಎಂದೂ ಕರೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.