ಸಾಂದರ್ಭಿಕ ಚಿತ್ರ
(ಎಐ ಚಿತ್ರ)
ಪಟ್ನಾ: ‘ಡಾಗ್ ಬಾಬು’ ಎಂಬ ನಾಯಿಗೆ ಬಿಹಾರದ ಪಟ್ನಾದಲ್ಲಿ ವಾಸಸ್ಥಾನ ಪ್ರಮಾಣಪತ್ರವನ್ನು ನೀಡಲಾಗಿದ್ದು, ಈ ವಿಚಾರ ವಿವಾದಕ್ಕೀಡಾದ ಬೆನ್ನಲ್ಲೇ ಸಂಬಂಧಿಸಿದವರ ವಿರುದ್ಧ ಪ್ರಕರಣ ದಾಖಲಾಗಿದೆ.
‘ಡಾಗ್ ಬಾಬು’ ಮತ್ತು ಅದರ ವಾಸಸ್ಥಾನ ಪ್ರಮಾಣಪತ್ರದ ಫೊಟೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿತ್ತು. ಈ ಬಗ್ಗೆ ಹಲವು ಜನ ತಕರಾರು ತೆಗೆದರು.
‘ಇಂತಹ ಹುಚ್ಚುತನಕ್ಕೆ ಅವಕಾಶ ನೀಡುವ ಬದಲು, ಸುಪ್ರೀಂ ಕೋರ್ಟ್ ಇತ್ತೀಚೆಗೆ ನೀಡಿದ ಸಲಹೆಯಂತೆ ಚುನಾವಣಾ ಆಯೋಗವು ಆಧಾರ್ ಕಾರ್ಡ್ ಮತ್ತು ಪಡಿತರ ಕಾರ್ಡ್ ಅನ್ನು ಏಕೆ ಪರಿಗಣಿಸುತ್ತಿಲ್ಲ’ ಎಂದು ಹಲವರು ಪ್ರಶ್ನಿಸಿದರು.
ಈ ಕುರಿತು ಚರ್ಚೆ ಕಾವೇರುತ್ತಿದ್ದಂತೆ, ‘ನಾಯಿಗೆ ನೀಡಿರುವ ವಾಸಸ್ಥಾನ ಪ್ರಮಾಣಪತ್ರವನ್ನು ರದ್ದುಗೊಳಿಸಲಾಗಿದೆ’ ಎಂದು ಜಿಲ್ಲಾಡಳಿತ ಸೋಮವಾರ ಸ್ಪಷ್ಟನೆ ನೀಡಿತು.
ನಾಯಿಯ ಹೆಸರಿನಲ್ಲಿ ವಾಸಸ್ಥಾನ ಪ್ರಮಾಣಪತ್ರ ಪಡೆಯಲು ಅರ್ಜಿ ಹಾಕಿದ ವ್ಯಕ್ತಿ, ಅದಕ್ಕಾಗಿ ಮಾಹಿತಿಯನ್ನು ದಾಖಲಿಸಿದ ಕಂಪ್ಯೂಟರ್ ಆಪರೇಟರ್ ಮತ್ತು ಪ್ರಮಾಣಪತ್ರವನ್ನು ನೀಡಿದ ಅಧಿಕಾರಿಯ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
24 ಗಂಟೆಯೊಳಗೆ ವರದಿ ನೀಡುವಂತೆ ಆದೇಶಿಸಲಾಗಿದೆ. ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಇಲಾಖಾ ಶಿಸ್ತುಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.