ADVERTISEMENT

ಮುಂಬೈ | ಫಾಹಿಮ್‌ ಪ್ರಮಾಣಪತ್ರ ಕಡ್ಡಾಯವಲ್ಲದ ಉದ್ಯೋಗ ಮಾಡಬಹುದು: ‘ಮಹಾ‘ ಸರ್ಕಾರ

ಪಿಟಿಐ
Published 25 ನವೆಂಬರ್ 2025, 13:34 IST
Last Updated 25 ನವೆಂಬರ್ 2025, 13:34 IST
   

ಮುಂಬೈ: 26/11ರ ಮುಂಬೈ ಮೇಲಿನ ಭಯೋತ್ಪಾದನಾ ದಾಳಿ ಪ್ರಕರಣದಲ್ಲಿ ಖುಲಾಸೆಗೊಂಡಿರುವ ಫಾಹಿಮ್‌ ಅನ್ಸಾರಿ ಅವರು ಪೊಲೀಸ್ ಪರಿಶೀಲನೆ ಮತ್ತು ಪ್ರಮಾಣಪತ್ರದ ಕಡ್ಡಾಯವಲ್ಲದ ಯಾವುದೇ ಉದ್ಯೋಗವನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಮಹಾರಾಷ್ಟ್ರ ಸರ್ಕಾರ ಮಂಗಳವಾರ ಬಾಂಬೆ ಹೈಕೋರ್ಟ್‌ಗೆ ತಿಳಿಸಿದೆ.

ಜೀವನೋಪಾಯಕ್ಕಾಗಿ ಆಟೊ ರಿಕ್ಷಾ ಓಡಿಸಲು (ವಾಣಿಜ್ಯ ಉದ್ದೇಶಗಳಿಗಾಗಿ) ಕಡ್ಡಾಯವಾಗಿರುವ ಪೊಲೀಸ್ ಪರಿಶೀಲನಾ ಪ್ರಮಾಣಪತ್ರ ಕೊಡಿಸುವಂತೆ ಕೋರಿ, ಫಾಹಿಮ್‌‌ ಅನ್ಸಾರಿ ಅವರು ಜನವರಿಯಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಅನ್ಸಾರಿ, ನಿಷೇಧಿತ ಭಯೋತ್ಪಾದಕ ಸಂಘಟನೆಯ ಸಕ್ರಿಯ ಸದಸ್ಯನೆಂದು ಶಂಕಿಸಲಾಗಿದ್ದು, ಅವರಿನ್ನೂ ಪೊಲೀಸರ ನಿಗಾದಲ್ಲಿರುವುದರಿಂದ ಪ್ರಮಾಣಪತ್ರ ಕೋರಿ ಅವರು ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ಸರ್ಕಾರ ಸೆಪ್ಟೆಂಬರ್‌ ತಿಂಗಳಲ್ಲಿ ಹೈಕೋರ್ಟ್‌ಗೆ ತಿಳಿಸಿತ್ತು.

ADVERTISEMENT

‘ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್‌ ಅಮಿತ್ ಪಾಲ್ಕರ್ ಅವರು ಪೊಲೀಸರಿಂದ ಪರಿಶೀಲನೆ ಪ್ರಮಾಣಪತ್ರವನ್ನು ಕಡ್ಡಾಯಗೊಳಿಸುವ ಉದ್ಯೋಗಗಳ ಪಟ್ಟಿಯನ್ನು ಮಂಗಳವಾರ ನ್ಯಾಯಾಲಯಕ್ಕೆ ಸಲ್ಲಿಸಿದರು. ಪೊಲೀಸ್ ಪರಿಶೀಲನಾ ಪ್ರಮಾಣಪತ್ರ ಕಡ್ಡಾಯವಲ್ಲದ ಯಾವುದೇ ಉದ್ಯೋಗವನ್ನು ಅನ್ಸಾರಿ ಅವರು ಮಾಡಬಹುದು’ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು.

ಅನ್ಸಾರಿ ನಿಷೇಧಿತ ಭಯೋತ್ಪಾದಕ ಸಂಘಟನೆಯೊಂದಿಗೆ ನಂಟು ಹೊಂದಿರುವ ಬಗ್ಗೆ ಪೊಲೀಸರು ಗೌಪ್ಯ ವರದಿಯನ್ನು ಸಲ್ಲಿಸಿದ್ದು, ಈ ವಿಷಯವನ್ನು ನ್ಯಾಯಮೂರ್ತಿಯವರ ಕೊಠಡಿಯಲ್ಲಿ ವಿಚಾರಣೆ ನಡೆಸಬೇಕು ಎಂದು ಪಾಲ್ಕರ್‌ ಅವರು ನ್ಯಾಯಾಲಯವನ್ನು ಕೋರಿದರು. ಇದಕ್ಕೆ ಸಮ್ಮತಿಸಿದ ಪೀಠವು, ಈ ವಾರದ ಕೊನೆಯಲ್ಲಿ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿತು.

166 ಜನರನ್ನು ಬಲಿ ಪಡೆದ ಮತ್ತು ನೂರಾರು ಜನರು ಗಾಯಗೊಳ್ಳಲು ಕಾರಣವಾದ 2008ರ ನವೆಂಬರ್ 26ರ ಮುಂಬೈ ಮೇಲಿನ ಭಯೋತ್ಪಾದನಾ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನದ ಭಯೋತ್ಪಾದಕ ಅಜ್ಮಲ್‌ ಕಸಬ್‌ನನ್ನು ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿತ್ತು. ಈ ಘಟನೆಯಲ್ಲಿ ಫಾಹಿಮ್ ಅನ್ಸಾರಿ ಮತ್ತು ಸಬಾವುದ್ದೀನ್ ಅಹ್ಮದ್ ಅವರ ವಿರುದ್ಧ ಭಯೋತ್ಪಾದಕ ಸಂಘಟನೆಗೆ ಸಹಾಯ ಹಾಗೂ ದಾಳಿಗೆ ಕುಮ್ಮಕ್ಕು ನೀಡಿದ ಆರೋಪ ಹೊರಿಸಲಾಗಿತ್ತು. ಮೇ 2010ರಲ್ಲಿ, ವಿಶೇಷ ನ್ಯಾಯಾಲಯವು, ಸಾಕ್ಷ್ಯಾಧಾರಗಳ ಕೊರತೆಯ ಕಾರಣದಿಂದ ಫಾಹಿಮ್ ಮತ್ತು ಸಬಾವುದ್ದೀನ್ ಅಹ್ಮದ್ ಅವರನ್ನು ಖುಲಾಸೆಗೊಳಿಸಿತ್ತು.

ನಂತರ, ಅನ್ಸಾರಿ ಮುಂಬ್ರಾದ (ನೆರೆಯ ಥಾಣೆ ಜಿಲ್ಲೆಯಲ್ಲಿ) ಪ್ರಿಂಟಿಂಗ್‌ ಪ್ರೆಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಕಡಿಮೆ ಆದಾಯದ ಕಾರಣ, ಅನ್ಸಾರಿ ಅವರು  ವಾಣಿಜ್ಯ ಉದ್ದೇಶಗಳಿಗಾಗಿ ಆಟೊ ರಿಕ್ಷಾ ಓಡಿಸಲು ಕಡ್ಡಾಯವಾಗಿರುವ ಪೊಲೀಸ್ ಪರಿಶೀಲನಾ ಪ್ರಮಾಣಪತ್ರ (ಪಿಸಿಸಿ) ಕೋರಿ ಅರ್ಜಿ ಸಲ್ಲಿಸಿದರು. ಆರ್‌ಟಿಒದಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದ ಕಾರಣ, ನ್ಯಾಯಾಲಯದ ಮೊರೆ ಹೋದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.