ADVERTISEMENT

ಅಸ್ಸಾಂನಲ್ಲಿ ಎನ್‌ಡಿಎಗೆ ಸವಾಲು

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2021, 19:37 IST
Last Updated 26 ಫೆಬ್ರುವರಿ 2021, 19:37 IST
ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್
ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್   

ಅಸ್ಸಾಂನಲ್ಲಿ ಬಿಜೆಪಿ ಈ ಬಾರಿ 100ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಗುರಿ ಹಾಕಿಕೊಂಡಿದೆ. ಈಚಿನ ವರ್ಷಗಳಲ್ಲಿ ಈಶಾನ್ಯ ರಾಜ್ಯಗಳಲ್ಲಿ ತನ್ನ ಶಕ್ತಿಯನ್ನು ಹೆಚ್ಚಿಸಿಕೊಂಡಿರುವ ಬಿಜೆಪಿಗೆ ಅಸ್ಸಾಂ ವಿಧಾನಸಭಾ ಚುನಾವಣೆ ಮಹತ್ವದ್ದಾಗಿದೆ. ಆದರೆ, ಹಾಕಿಕೊಂಡಿರುವ ಗುರಿಯನ್ನು ತಲುಪಲು ಬಿಜೆಪಿ ಸಫಲವಾಗುತ್ತದೆಯೇ ಅಥವಾ ಈ ಹಿಂದಿಗಿಂತಲೂ (60) ಕಡಿಮೆ ಸ್ಥಾನಗಳನ್ನು ಗೆಲ್ಲುತ್ತದೆಯೇ ಎಂಬ ಕುತೂಹಲ ಮೂಡಿದೆ.

ಕಳೆದ ವರ್ಷ ಭಾರಿ ವಿರೋಧಕ್ಕೆ ಕಾರಣವಾಗಿ, ಜಗತ್ತಿನ ಗಮನವನ್ನು ಸೆಳೆದಿದ್ದ ಪೌರತ್ವ ತಿದ್ದುಪಡಿ ಕಾಯ್ದೆ, ಎನ್‌ಆರ್‌ಸಿ, ಸಿಎಎ ಎಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ಅಸ್ಸಾಂ ರಾಜ್ಯದೊಂದಿಗೆ ತಳಕು ಹಾಕಿಕೊಂಡಿವೆ. ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಆರಂಭದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದೇ ಅಸ್ಸಾಂನಲ್ಲಿ. ಆದರೆ ಆ ನಂತರ ಅಲ್ಲಿ ಅದು ತಣ್ಣಗಾಗಿ ದೆಹಲಿಯಲ್ಲಿ ತೀವ್ರಗೊಂಡಿತು. ಇಲ್ಲಿ ಅಧಿಕಾರ ಉಳಿಸಿಕೊಳ್ಳಬಲ್ಲೆ ಎಂಬ ವಿಶ್ವಾಸ ಬಿಜೆಪಿಗೆ ಇದ್ದರೂ, ಜನರು ಎಂಥ ಪ್ರತಿಕ್ರಿಯೆ ನೀಡುತ್ತಾರೆ ಎಂಬುದರ ಸ್ಪಷ್ಟ ಚಿತ್ರಣ ಚುನಾವಣೆ ಸಮೀಪಿಸುವ ವೇಳೆಗೆ ಲಭಿಸಬಹುದು.

ಇನ್ನೊಂದೆಡೆ ಕಾಂಗ್ರೆಸ್‌ ಮುಂಚಿತವಾಗಿಯೇ ಎಚ್ಚೆತ್ತುಕೊಂಡು, ಎಡಪಕ್ಷಗಳು ಹಾಗೂ ರಾಜ್ಯಸಭಾ ಸದಸ್ಯ ಅಜಿತ್‌ ಕುಮಾರ್‌ ಭುಯಾನ್‌ ನೇತೃತ್ವದಲ್ಲಿ ಇತ್ತೀಚೆಗೆ ರಚನೆಯಾಗಿರುವ ಅಂಚಲಿಕ್‌ ಗಣ ಮೋರ್ಚಾದ ಜತೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದೆ. ಈ ಮೈತ್ರಿಕೂಟವೂ ಸಹ, ‘ನಾವು 100ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.