ADVERTISEMENT

ಚಂಡೀಗಡದಲ್ಲಿ ಕೋವಿಡ್ ನಿರ್ಬಂಧ ಸಡಿಲ: ಸಂಜೆ 7ರವರೆಗೂ ಅಂಗಡಿಗಳು ಓಪನ್

ಪಿಟಿಐ
Published 15 ಜೂನ್ 2021, 16:52 IST
Last Updated 15 ಜೂನ್ 2021, 16:52 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಚಂಡೀಗಡ: ಕೋವಿಡ್ ಪ್ರಕರಣಗಳು ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಚಂಡೀಗಡಲ್ಲಿ ಕೋವಿಡ್ ನಿರ್ಬಂಧಗಳನ್ನು ಮತ್ತಷ್ಟು ಸಡಿಲಿಸಿದ್ದು, ನಗರದ ಎಲ್ಲಾ ಅಂಗಡಿಗಳು ಸಂಜೆ 7 ಗಂಟೆಯವರೆಗೆ ತೆರೆದಿರಲು ಅವಕಾಶ ನೀಡಲಾಗಿದೆ.

'ಎಲ್ಲಾ ಅಂಗಡಿಗಳು ಬೆಳಿಗ್ಗೆ 10 ರಿಂದ ಸಂಜೆ 7 ರವರೆಗೆ ತೆರೆದಿರುತ್ತವೆ. ಅಂಗಡಿ ಮಾಲೀಕರು ಕೋವಿಡ್‌ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು' ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ಈ ಮೊದಲು, ಜೂನ್ 8 ರಂದು ಎಲ್ಲಾ ಅಂಗಡಿಗಳನ್ನು ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ತೆರೆದಿರಲು ಅನುಮತಿ ನೀಡಲಾಗಿತ್ತು. ಇದೀಗ ಒಂದು ಗಂಟೆ ವಿಸ್ತರಿಸಿ ಅವಕಾಶ ನೀಡಲಾಗಿದೆ.

ADVERTISEMENT

ಮಂಗಳವಾರ ನಡೆದ ಪರಿಶೀಲನಾ ಸಭೆಯಲ್ಲಿ, ನಗರದ ಆಡಳಿತವು ರಾತ್ರಿ 10.30 ರಿಂದ ಬೆಳಗ್ಗೆ 5ರವರೆಗೆ ನೈಟ್ ಕರ್ಫ್ಯೂ ವಿಧಿಸಲು ನಿರ್ಧರಿಸಿತು. ಇದಕ್ಕೂ ಮುನ್ನ ರಾತ್ರಿ 10 ಗಂಟೆಯಿಂದ ಮುಂಜಾನೆ 5ರವರೆಗೆ ಕರ್ಫ್ಯೂ ಜಾರಿಯಲ್ಲಿತ್ತು. ಇದೀಗ ರೆಸ್ಟೋರೆಂಟ್‌ಗಳು ಬೆಳಿಗ್ಗೆ 10 ರಿಂದ ರಾತ್ರಿ 10 ರವರೆಗೆ ಶೇ 50ರಷ್ಟು ಸಾಮರ್ಥ್ಯದೊಂದಿಗೆ ತೆರೆದಿರಲು ಅವಕಾಶ ನೀಡಲಾಗಿದೆ.

ಸಭೆಯಲ್ಲಿ, ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯು (ಪಿಜಿಐಎಂಇಆರ್) ಲಸಿಕೆ ಪಡೆಯದ 18 ವರ್ಷದೊಳಗಿನವರ ಸೆರೋ ಸಮೀಕ್ಷೆಯನ್ನು ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿತು. 'ಸೆರೋ ಸಮೀಕ್ಷೆಯ ಫಲಿತಾಂಶವು ಈ ವಯಸ್ಸಿನವರಿಗೆ ಲಸಿಕೆ ಹಾಕುವ ಭವಿಷ್ಯದ ಕಾರ್ಯತಂತ್ರವನ್ನು ರೂಪಿಸಲು ನೆರವಾಗಬಹುದು. ಮೂರನೇ ಅಲೆಯು ಜನರನ್ನು ಬಾಧಿಸುವ ಆತಂಕದ ದೃಷ್ಟಿಯಿಂದ ಕಾರ್ಯತಂತ್ರವನ್ನು ರೂಪಿಸುವಲ್ಲಿ ಈ ಅಧ್ಯಯನವನ್ನು ಬಳಸಿಕೊಳ್ಳಬಹುದು ಎಂದು ಹೇಳಿಕೆ ತಿಳಿಸಿದೆ.

ರಕ್ತದ ಮಾದರಿ ಸಂಗ್ರಹದ ಮೂಲಕ ಕೊರೊನಾ ವೈರಾಣುವಿನ ರೂಪಾಂತರ ಗುರುತಿಸಲು ಹಾಗೂ ಜನರಲ್ಲಿ ಪ್ರತಿಕಾಯ ಅಭಿವೃದ್ಧಿಯಾಗಿದೆಯೇ ಎಂಬುದನ್ನು ತಿಳಿಯಲು ಸೆರೋ ಸಮೀಕ್ಷೆಯನ್ನು ನಡೆಸಲಾಗುತ್ತದೆ.

ಸೋಮವಾರ ಚಂಡೀಗಡದಲ್ಲಿ ಹೊಸದಾಗಿ 50 ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 61,160ಕ್ಕೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.