ADVERTISEMENT

ಚಂಡೀಗಡದಲ್ಲೊಂದು ವಿಭಿನ್ನ ಪ್ರೇಮಕಥೆ: ಮಂಜಿತ್ ಕೌರ್ ಎಂಬ ‘ಸಿಂಡ್ರೆಲಾ’

ಗೌತಮ್ ಧೀರ್
Published 6 ಫೆಬ್ರುವರಿ 2020, 19:45 IST
Last Updated 6 ಫೆಬ್ರುವರಿ 2020, 19:45 IST
ಮಹೇಂದ್ರ ಸಿಂಗ್ ಮತ್ತು ಮಂಜಿತ್ ಕೌರ್
ಮಹೇಂದ್ರ ಸಿಂಗ್ ಮತ್ತು ಮಂಜಿತ್ ಕೌರ್   

ಚಂಡೀಗಡ: ಕಷ್ಟದಲ್ಲಿದ್ದ ಸಿಂಡ್ರೆಲಾಳನ್ನು ರಾಜಕುಮಾರನೊಬ್ಬ ಇಷ್ಟಪಟ್ಟು ಮದುವೆಯಾದ ಕಥೆಯನ್ನು ಬಾಲ್ಯದಲ್ಲಿ ಬಹುತೇಕರು ಕೇಳಿರಬಹುದು. ಅದೇ ಮಾದರಿಯ ಘಟನೆಯೊಂದು ಪಂಜಾಬ್‌ನ ಬರ್ನಾಲಾದಲ್ಲಿ ನಡೆದಿದೆ.

ಈ ಕಥೆಯ ‘ಸಿಂಡ್ರೆಲಾ’ ದಲಿತ ಮಹಿಳೆ ಮಂಜಿತ್ ಕೌರ್. ಬಾಲ್ಯದಲ್ಲೇ ಬ್ಯಾಡ್ಮಿಂಟನ್ ತಾರೆಯಾಗಬೇಕೆಂಬ ಕನಸು ಕಂಡಿದ್ದ ಮಂಜಿತ್‌ಗೆ ಆರೋಗ್ಯ ಕೈಕೊಟ್ಟಿತ್ತು. ಬ್ಯಾಡ್ಮಿಂಟನ್ ಆಸೆ ಕೈಬಿಟ್ಟ ಸ್ವಲ್ಪ ದಿನಗಳಲ್ಲೇ ತಂದೆ–ತಾಯಿಯನ್ನೂ ಕಳೆದುಕೊಂಡ ಆಕೆಯ ಪಾಲಿಗೆ ದಿನಕ್ಕೆ ನೂರು ರೂಪಾಯಿ ಸಂಪಾದಿಸುವಷ್ಟೂ ಶಕ್ತಿ ಇರಲಿಲ್ಲ.

ಕೂಲಿನಾಲಿ ಮಾಡಿಕೊಂಡು ಹರಕು ಗುಡಿಸಲಿನಲ್ಲೇ ಏಕಾಂಗಿಯಾಗಿದ್ದ ಮಂಜಿತ್ ಬದುಕಿನಲ್ಲಿ ಮಹೇಂದ್ರ ಸಿಂಗ್ ಎನ್ನುವ ರಾಜಕುಮಾರನ ಪ್ರವೇಶವಾಯಿತು. ಮಂಜಿತ್ ಬಗ್ಗೆ ಮಾಧ್ಯಮಗಳಲ್ಲಿ ಓದಿದ್ದ ಕೆನಡಾದ ಅನಿವಾಸಿ ಭಾರತೀಯ ಮಹೇಂದ್ರ ಅವರಿಗೆ ಆಕೆಗೆ ಏನಾದರೂ ಸಹಾಯ ಮಾಡಬೇಕೆಂಬ ಮನಸಾಯಿತು. ಆದರೆ, ಮಂಜಿತ್ ವಿಳಾಸ ಮತ್ತು ದೂರವಾಣಿ ಸಂಖ್ಯೆ ಅವರ ಬಳಿ ಇರಲಿಲ್ಲ. ಕೊನೆಗೆ ಸಂಬಂಧಿಕರೊಬ್ಬರನ್ನು ಮಂಜಿತ್ ಇದ್ದ ಬರ್ನಾಲಾ ಗ್ರಾಮಕ್ಕೆ ಕಳುಹಿಸಿ ಆಕೆಯ ಬಗ್ಗೆ ವಿವರ ಮತ್ತು ಮೊಬೈಲ್ ಸಂಖ್ಯೆ ಪಡೆದರು.

ADVERTISEMENT

ನಿತ್ಯವೂ ಮೊಬೈಲ್‌ನಲ್ಲಿ ಮಹೇಂದ್ರ ಮತ್ತು ಮಂಜಿತ್ ಮಾತನಾಡುತ್ತಲೇ ಒಬ್ಬರಿಗೊಬ್ಬರು ಇಷ್ಟಪಟ್ಟರು. ಅವಳಿಗೆ ಸಹಾಯ ಮಾಡುವ ಬದಲು ಆಕೆಯನ್ನೇ ಜೀವನ ಸಂಗಾತಿಯನ್ನಾಗಿ ಮಾಡಿಕೊಂಡರೆ ಹೇಗೆಂಬ ಆಲೋಚನೆ ಬಂದದ್ದೇ ತಡ, ಮಹೇಂದ್ರ, ಸೀದಾ ಭಾರತಕ್ಕೆ ಬಂದು ಮಂಜಿತ್‌ಳನ್ನು ವಿವಾಹವಾದರು. ಅಂದಹಾಗೆ ಮಹೇಂದ್ರ ಮೇಲ್ಜಾತಿಗೆ ಸೇರಿದ್ದರೆ ಮಂಜಿತ್ ಕೆಳಜಾತಿಯವರು. ಮಹೇಂದ್ರ ಮೂಲತಃ ಪಂಜಾಬ್‌ನ ಭಟಿಂಡಾದವರು. ಜ.7ರಂದು ವಿವಾಹವಾದ ಈ ಜೋಡಿ ಈಚೆಗಷ್ಟೇ ವಿವಾಹ ನೋಂದಣಿ ಮಾಡಿಸಿಕೊಂಡಿದೆ. ಮಹೇಂದ್ರ ಜೊತೆ ಶೀಘ್ರದಲ್ಲೇ ಕೆನಡಾಕ್ಕೆ ತೆರಳಲಿರುವ ಮಂಜಿತ್, ‘ಇದೆಲ್ಲಾ ಪವಾಡದಂತೆ ನಡೆಯುತ್ತಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.