ADVERTISEMENT

ಬಿಜೆಪಿ ಸಖ್ಯ ತೊರೆದದ್ದು ತಪ್ಪು: ಚಂದ್ರಬಾಬು ನಾಯ್ಡು ಪಶ್ಚಾತ್ತಾಪ

ಇದೇ ಮೊದಲ ಬಾರಿಗೆ ಪಶ್ಚಾತ್ತಾಪದ ಮಾತು

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2019, 14:08 IST
Last Updated 12 ಅಕ್ಟೋಬರ್ 2019, 14:08 IST
ಚಂದ್ರಬಾಬು ನಾಯ್ಡು (ಸಂಗ್ರಹ ಚಿತ್ರ)
ಚಂದ್ರಬಾಬು ನಾಯ್ಡು (ಸಂಗ್ರಹ ಚಿತ್ರ)   

ಅಮರಾವತಿ: ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳಲ್ಲಿ ಭಾರಿ ಸೋಲು ಕಂಡಿರುವ ತೆಲುಗುದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ಇದೇ ಮೊದಲ ಬಾರಿಗೆ ಪಶ್ಚಾತ್ತಾಪ ಸ್ವರೂಪದ ಮಾತುಗಳನ್ನಾಡಿದ್ದು, ‘ಬಿಜೆಪಿ ಜೊತೆಗಿನ ಮೈತ್ರಿಯನ್ನು ಅಂತ್ಯಗೊಳಿಸಿದ್ದು ನಾವು ಮಾಡಿದ ತಪ್ಪು’ ಎಂದಿದ್ದಾರೆ.

ಪಕ್ಷದ ವೇದಿಕೆಗಳಲ್ಲಿ ಈ ಹಿಂದೆಯೂ ಕೆಲವು ಬಾರಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದ ನಾಯ್ಡು, ಶನಿವಾರ ವಿಶಾಖಪಟ್ಟಣದಲ್ಲಿ ನಡೆದ ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ಸಭೆಯಲ್ಲಿ ಬಹಿರಂಗವಾಗಿ ಈ ಹೇಳಿಕೆ ನೀಡಿದ್ದಾರೆ. ‘ತೆಲಂಗಾಣದಲ್ಲಿ ಕಾಂಗ್ರೆಸ್‌ ಜೊತೆ ಕೈಜೋಡಿಸಿದ್ದರಿಂದಾಗಿ ಟಿಆರ್‌ಎಸ್‌ ಮುಂದೆ ಎರಡೂ ಪಕ್ಷಗಳು ಹೀನಾಯ ಸೋಲು ಅನುಭವಿಸಬೇಕಾಯಿತು’ ಎಂದಿದ್ದಾರೆ.

‘ಅಮರಾವತಿ, ಪೋಲಾವರಂ ಯೋಜನೆಗಳು ಹಾಗೂ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡುವ ವಿಚಾರದಲ್ಲಿ ಕೇಂದ್ರದ ಮೇಲೆ ಒತ್ತಡ ಹೇರಲು ನಾವು ಎನ್‌ಡಿಎಯಿಂದ ಹೊರಬಂದೆವು. ಕೇಂದ್ರದಲ್ಲಿ ಸಚಿವರಾಗಿದ್ದ ನಮ್ಮ ಪಕ್ಷದ ನಾಯಕರು ರಾಜೀನಾಮೆ ಕೊಟ್ಟರು. ಆ ನಿರ್ಧಾರ ತಿರುಗುಬಾಣವಾಗಿ, ಪಕ್ಷಕ್ಕೆ ಭಾರಿ ಹಿನ್ನಡೆಯಾಯಿತು. ಕೇಂದ್ರದ ವಿರುದ್ಧ ಅವಿಶ್ವಾಸ ಮಂಡಿಸುವ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು, ‘ನಾಯ್ಡು ಅವರು ವೈಎಸ್‌ಆರ್‌ ಕಾಂಗ್ರೆಸ್‌ ಬೀಸಿರುವ ಬಲೆಗೆ ಬಿದ್ದಿದ್ದಾರೆ’ ಎಂಬ ಎಚ್ಚರಿಕೆಯನ್ನು ಸಹ ನಿಡಿದ್ದರು. ಅವರ ಎಚ್ಚರಿಕೆಯನ್ನೂ ನಾವು ಕಡೆಗಣಿಸಿದ್ದೆವು ಎಂದರು.

‘ಕಾಂಗ್ರೆಸ್‌ ಜೊತೆಗಿನ ನಮ್ಮ ಮೈತ್ರಿಯನ್ನು ಜನರು ಒಪ್ಪಲಿಲ್ಲ. ನಾವು ಅನೇಕ ಒಳ್ಳೆಯ ಕೆಲಸಗಳನ್ನು ಮಾಡಿದ್ದರೂ ಜನರು ನಮಗೆ ಇನ್ನೊಂದು ಅವಕಾಶ ನೀಡಲು ನಿರಾಕರಿಸಿದರು. ತೆಲಂಗಾಣದಲ್ಲಿ ಕಾಂಗ್ರೆಸ್‌ ಜೊತೆ ಸೀಟು ಹೊಂದಾಣಿಕೆ ಮಾಡಿಕೊಳ್ಳಲು ನಾನು ನಿರ್ಧರಿಸಿದ್ದೆ. ಚುನಾವಣೆಗೂ ಸ್ವಲ್ಪ ಮೊದಲೇ ನಾವು ದೊಡ್ಡ ತಪ್ಪು ಮಾಡಿದ್ದೇವೆ ಎಂಬುದು ನನಗೆ ಮನವರಿಕೆಯಾಗಿತ್ತು. ಆದರೆ, ಅದಾಗಲೇ ವಿಳಂಬವಾಗಿತ್ತು. ಪರಿಣಾಮ, ಚುನಾವಣೆಯಲ್ಲಿ ನಾವು ಶೋಚನೀಯ ಸೋಲನ್ನು ಕಂಡೆವು’ ಎಂದು ನಾಯ್ಡು ಹೇಳಿದ್ದಾರೆ.

ನಾಯ್ಡು ಅವರ ಈ ಪಶ್ಚಾತ್ತಾಪದ ಹೇಳಿಕೆಗೆ ಬಿಜೆಪಿಯು ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಬಿಜೆಪಿಯ ಹಿರಿಯ ನಾಯಕರೊಬ್ಬರು, ‘ಅವರು (ನಾಯ್ಡು) ಮತ್ತು ಅವರ ಪ್ರಾದೇಶಿಕ ಪಕ್ಷಕ್ಕೆ ಎನ್‌ಡಿಎ ಬಾಗಿಲು ಸದಾ ಮುಚ್ಚಿರುತ್ತದೆ ಎಂದು ಬಿಜೆಪಿಯ ಅಧ್ಯಕ್ಷ ಅಮಿತ್‌ ಶಾ ಹಿಂದೆಯೇ ಹೇಳಿದ್ದರು’ ಎಂದಿದ್ದಾರೆ. ಹೀಗಿದ್ದರೂ ಮುಂದೆ ಬಿಜೆಪಿ– ಟಿಡಿಪಿ ಪಕ್ಷಗಳು ಒಟ್ಟಾಗಿ ವೈಎಸ್‌ಆರ್‌ ಕಾಂಗ್ರೆಸ್‌ ವಿರುದ್ಧ ಹೋರಾಡುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.

ನಟ ಪವನ್ ಕಲ್ಯಾಣ್‌ ನೇತೃತ್ವದ ಜನಸೇನಾ ಪಾರ್ಟಿಯ ಜೊತೆಗೆ ಪುನಃ ಕೈಜೋಡಿಸುವ ಬಗ್ಗೆ ನಾಯ್ಡು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. 2014ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ, ಜನಸೇನಾ ಪಕ್ಷಗಳ ಸಹಯೋಗದೊಂದಿಗೆ ಆಂಧ್ರದಲ್ಲಿ ನಾಯ್ಡು ಅಧಿಕಾರ ಹಿಡಿದಿದ್ದರು. 2019ರಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿದ್ದರಿಂದ ಹೀನಾಯ ಸೋಲನ್ನು ಕಾಣುವಂತಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.