
ಜೈಪುರ: ‘ವಿಚಾರಣೆಯ ಮೂಲಕ ಅಪರಾಧಿ ಎಂದು ಸಾಬೀತಾಗುವವರೆಗೂ ಆರೋಪಿಗಳು ನಿರಪರಾಧಿಯಾಗಿರುತ್ತಾರೆ ಮತ್ತು ಅವರು ಜಾಮೀನಿಗೆ ಅರ್ಹರಾಗಿರುತ್ತಾರೆ’ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ಭಾನುವಾರ ತಿಳಿಸಿದರು.
ಜೈಪುರ ಸಾಹಿತ್ಯ ಉತ್ಸವ 2026ರ ‘ನ್ಯಾಯ ಎಂದರೇನು?’ ಎನ್ನುವ ಗೋಷ್ಠಿಯಲ್ಲಿ ವೀರ್ ಸಾಂಘ್ವಿ ಅವರೊಂದಿಗಿನ ಸಂವಾದದಲ್ಲಿ ಭಾಗವಹಿಸಿದ್ದ ಚಂದ್ರಚೂಡ್ ಅವರು, ದೆಹಲಿ ಗಲಭೆ ಸಂಚು ಪ್ರಕರಣದ ಆರೋಪಿ ಉಮರ್ ಖಾಲಿದ್ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನಿರಾಕರಿಸಿರುವುದರ ಕುರಿತ ಪ್ರಶ್ನೆಗೆ ಉತ್ತರಿಸಿದರು.
‘ಒಬ್ಬ ವ್ಯಕ್ತಿ 5 ವರ್ಷ ಇಲ್ಲವೇ 7 ವರ್ಷ ವಿಚಾರಣಾಧೀನ ಕೈದಿಯಾಗಿ ಜೈಲು ಶಿಕ್ಷೆ ಅನುಭವಿಸಿ, ನಂತರ ನಿರ್ದೋಷಿ ಎಂದು ಬಿಡುಗಡೆಯಾದರೆ ಅವರಿಗಾದ ಕಾಲದ ನಷ್ಟವನ್ನು ಹೇಗೆ ತುಂಬಿಕೊಡುವುದು’ ಎಂದರು.
‘ಸರಣಿ ಅತ್ಯಾಚಾರ, ಕೊಲೆ ಎಸಗಿದ, ದೇಶ ತೊರೆಯುವ ಸಾಧ್ಯತೆ ಇರುವ, ವಿಚಾರಣೆಯ ಹಂತದಲ್ಲಿ ಸಾಕ್ಷ್ಯನಾಶ ಮಾಡುವ ಸಾಧ್ಯತೆ ಇರುವ ಆರೋಪಿಗಳಿಗೆ ಜಾಮೀನು ನಿರಾಕರಿಸಬಹುದು. ಇವುಗಳ ಹೊರತಾಗಿ ಉಳಿದ ಆರೋಪಿಗಳು ಜಾಮೀನಿಗೆ ಅರ್ಹರು’ ಎಂದು ಚಂದ್ರಚೂಡ್ ಅವರು ವಿವರಿಸಿದರು.
‘ಸಂವಿಧಾನದ ನಿಯಮಗಳು ಪರಮೋಚ್ಚವಾಗಿದ್ದು, ಸರ್ಕಾರದ ನಿಯಮಗಳು ಸಂವಿಧಾನದ ಅಡಿಯಲ್ಲಿ ಬರುತ್ತವೆ. ಜನರ ಬದುಕುವ ಹಕ್ಕು ತ್ವರಿತ ವಿಚಾರಣೆಯ ಹಕ್ಕನ್ನೂ ಒಳಗೊಂಡಿದೆ. ತ್ವರಿತ ವಿಚಾರಣೆ ಸಾಧ್ಯವಾಗದಿದ್ದಾಗ ಜಾಮೀನು ನೀಡಬೇಕು’ ಎಂದು ಅಭಿಪ್ರಾಯಪಟ್ಟರು.
ಭಾರತದ ಮುಖ್ಯನ್ಯಾಯಮೂರ್ತಿಯಾಗಿ ತಮ್ಮ 24 ತಿಂಗಳ ಅವಧಿಯಲ್ಲಿ 21 ಸಾವಿರ ಜಾಮೀನು ಅರ್ಜಿಗಳನ್ನು ಇತ್ಯರ್ಥಪಡಿಸಿದ್ದಾಗಿ ತಿಳಿಸಿದ ಅವರು, ಪವನ್ ಖೇಡ ಮತ್ತು ತೀಸ್ತಾ ಸೆಟಲ್ವಾಡ್ ಅವರಿಗೆ ಜಾಮೀನು ಮಂಜೂರು ಮಾಡಿದ್ದನ್ನು ವಿವರಿಸಿದರು.
ನ್ಯಾಯಾಲಯದಲ್ಲಿನ ಭ್ರಷ್ಟಾಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಸಮಾಜದ ಭಾಗವಾದ ನ್ಯಾಯಾಂಗದಲ್ಲಿಯೂ ಭ್ರಷ್ಟಾಚಾರ ಇರುವುದು ನಿಜ. ಆದರೆ, ಅದನ್ನು ಅತಿರಂಜಿಸಿ ಹೇಳಲಾಗುತ್ತಿದೆ’ ಎಂದ ಅವರು, ‘ಸರ್ಕಾರವು ಈ ದಿಸೆಯಲ್ಲಿ ವಾಗ್ಧಂಡನೆಯ ನಿಯಮಗಳನ್ನು ಬದಲಿಸಬೇಕು’ ಎಂದು ಸಲಹೆ ನೀಡಿದರು.
‘ಕೊಲಿಜಿಯಂ ಮೂರು ವರ್ಷಗಳ ಅವಧಿ ಹೊಂದಿರಬೇಕು. ಈ ವ್ಯವಸ್ಥೆಯಲ್ಲಿ ಸರ್ಕಾರಗಳು ಹಿಡಿತ ಸಾಧಿಸಲು ಅವಕಾಶ ಇರಬಾರದು’ ಎಂದು ಅಭಿಪ್ರಾಯಪಟ್ಟರು.
ವೈವಾಹಿಕ ಅತ್ಯಾಚಾರವನ್ನು ಅಪರಾಧದ ವ್ಯಾಪ್ತಿಗೆ ತರುವ ಬಗ್ಗೆ ತಮ್ಮ ಅವಧಿಯಲ್ಲಿ ತೀರ್ಪು ನೀಡಲು ಸಾಧ್ಯವಾಗದೇ ಇರುವುದು ಪಶ್ಚಾತ್ತಾಪದ ವಿಚಾರ. ಇದರಲ್ಲಿ ಕಾನೂನು ಬದಲಾಗಬೇಕಿದೆ. ಸುಪ್ರೀಂ ಕೋರ್ಟ್ ಅನ್ನು ಜನರ ಕೋರ್ಟ್ ಆಗಿ ಮಾಡಿದ್ದೆ. ಈ ಬಗ್ಗೆ ತೃಪ್ತಿ ಇದೆ ಎಂದು ಡಿ.ವೈ.ಚಂದ್ರಚೂಡ್ ಹೇಳಿದರು.
ಸರ್ಕಾರಗಳು ರಾಷ್ಟ್ರೀಯ ಭದ್ರತೆಯ ವಿಚಾರವನ್ನು ಮುಂದಿಟ್ಟಾಗ ನ್ಯಾಯಾಲಯ ಏನೂ ಮಾಡಲಾಗುವುದಿಲ್ಲಡಿ.ವೈ.ಚಂದ್ರಚೂಡ್ ನಿವೃತ್ತ ಸಿಜೆಐ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.