
ಚಂದ್ರಾಪುರ (ಮಹಾರಾಷ್ಟ್ರ): ಸಾಲವನ್ನು ಹಿಂಪಡೆಯಲು ರೈತರೊಬ್ಬರಿಂದ ಒತ್ತಾಯಪೂರ್ವಕವಾಗಿ ಮೂತ್ರಪಿಂಡವನ್ನು ಮಾರಾಟ ಮಾಡಿಸಿರುವ ಘಟನೆ ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯಲ್ಲಿ ನಡೆದಿದೆ.
ರೈತ ರೋಷನ್ ಕುಡೆ (29), 2021ರಲ್ಲಿ ಶೇ 40ರಷ್ಟು ಬಡ್ಡಿದರದಲ್ಲಿ ₹50,000 ಹಣವನ್ನು ಇಬ್ಬರಿಂದ ಸಾಲ ಪಡೆದಿದ್ದರು. ಬಳಿಕ ಸಾಲ ನೀಡಿದವರು ಒಟ್ಟು ₹74 ಲಕ್ಷ ಬಾಕಿ ತೀರಿಸಬೇಕು ಎಂದು ಹೇಳಿದ್ದರು. ಸಾಲವನ್ನು ತೀರಿಸಲು ಮೂತ್ರಪಿಂಡವನ್ನು ಮಾರುವಂತೆ ಸಾಲ ನೀಡಿದ ಒಬ್ಬರು ಒತ್ತಾಯಿಸಿದ್ದಾರೆ ಎಂದು ರೋಷನ್ ಹೇಳಿದ್ದಾರೆ.
ಏಜೆಂಟ್ ಸಹಾಯದಿಂದ ತಮ್ಮನ್ನು ಕೋಲ್ಕತ್ತಾಕ್ಕೆ ಕರೆದುಕೊಂಡು ಹೋಗಿ ವೈದ್ಯಕೀಯ ಪರೀಕ್ಷೆ ನಡೆಸಿದ್ದರು. ಬಳಿಕ ಕಾಂಬೋಡಿಯಾದಲ್ಲಿ ತಮ್ಮ ಒಂದು ಮೂತ್ರಪಿಂಡವನ್ನು ತೆಗೆಸಿದ್ದಾರೆ. ಅದರಿಂದ ₹8 ಲಕ್ಷ ಹಣ ಪಡೆದಿದ್ದಾರೆ ಎಂದು ರೈತ ಹೇಳಿಕೊಂಡಿದ್ದಾರೆ.
ಈ ಕುರಿತು ತನಿಖೆ ನಡೆಸುತ್ತಿರುವ ಚಂದ್ರಾಪುರ ಪೊಲೀಸರು, ರೋಷನ್ ಅವರನ್ನು ಚಂದ್ರಾಪುರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಗುರುವಾರ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದಾಗ ಅವರ ಒಂದು ಮೂತ್ರಪಿಂಡ ಕಾಣೆಯಾಗಿರುವುದು ತಿಳಿದುಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನರನ್ನು ಬಂಧಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ ಎಂದು ಚಂದ್ರಾಪುರ ಪೊಲೀಸರು ತಿಳಿಸಿದ್ದಾರೆ.