ADVERTISEMENT

ಪತ್ತೆಯಾಯ್ತು ವಿಕ್ರಂ ಲ್ಯಾಂಡರ್‌; ಸಂಪರ್ಕ ಸಾಧಿಸಲು ಇಸ್ರೊ ಪ್ರಯತ್ನ  

ಚಂದ್ರಯಾನ 2

ಏಜೆನ್ಸೀಸ್
Published 8 ಸೆಪ್ಟೆಂಬರ್ 2019, 9:57 IST
Last Updated 8 ಸೆಪ್ಟೆಂಬರ್ 2019, 9:57 IST
ವಿಕ್ರಂ ಲ್ಯಾಂಡರ್‌– ಸಾಂಕೇತಿಕ ಚಿತ್ರ
ವಿಕ್ರಂ ಲ್ಯಾಂಡರ್‌– ಸಾಂಕೇತಿಕ ಚಿತ್ರ   

ಬೆಂಗಳೂರು: ಚಂದ್ರಯಾನ 2 ಯೋಜನೆಯಲ್ಲಿ ಚಂದ್ರನ ಅಂಗಳ ಪ್ರವೇಶಿಸಲು ಕಳುಹಿಸಲಾಗಿದ್ದ ವಿಕ್ರಂ ಲ್ಯಾಂಡರ್‌ನ ಇರುವಿಕೆಯನ್ನು ಪತ್ತೆ ಮಾಡಿರುವುದಾಗಿ ಇಸ್ರೊ ಅಧ್ಯಕ್ಷ ಕೆ.ಶಿವನ್‌ ಭಾನುವಾರ ಹೇಳಿದ್ದಾರೆ.

‘ಚಂದ್ರ ಕಕ್ಷೆಯಲ್ಲಿ ಸುತ್ತುತ್ತಿರುವ ಆರ್ಬಿಟರ್‌ ಥರ್ಮಲ್‌ ಇಮೇಜ್‌ ಕ್ಲಿಕ್ಕಿಸಿದ್ದು, ವಿಕ್ರಂ ಲ್ಯಾಂಡರ್‌ ಚಂದ್ರನ ನೆಲದಲ್ಲಿಇರುವುದನ್ನು ಗುರುತಿಸಲಾಗಿದೆ. ಆದರೆ, ವಿಕ್ರಂ ಜತೆಗೆ ಈವರೆಗೂ ಸಂಪರ್ಕ ಸಾಧಿಸಲು ಸಾಧ್ಯವಾಗಿಲ್ಲ’ಎಂದು ಶಿವನ್‌ ತಿಳಿಸಿರುವುದಾಗಿ ಎಎನ್ಐ ವರದಿ ಮಾಡಿದೆ.

ಶನಿವಾರ ಬೆಳಗಿನ ಜಾವ 1:53,ಚಂದ್ರನ ಅಂಗಳ ಪ್ರವೇಶಿಸಲು ಇನ್ನು 2.1 ಕಿ.ಮೀ. ದೂರ ಇರುವಾಗ ವಿಕ್ರಂ ಲ್ಯಾಂಡರ್‌ ಆರ್ಬಿಟರ್‌ನೊಂದಿಗೆ ಸಂಪರ್ಕ ಕಡಿದುಕೊಂಡಿತ್ತು. ದೇಶದ ಮಹತ್ವಾಕಾಂಕ್ಷೆಯ ಚಂದ್ರಯಾನ 2 ಪೂರ್ಣ ಯಶಸ್ವಿ ಎಂದು ಘೋಷಿಸಲು ವಿಕ್ರಂ ಇನ್ನು ಎರಡು ನಿಮಿಷ ಪಯಣಿಸಬೇಕಿತ್ತು. ಅಷ್ಟರಲ್ಲಿ ಇಸ್ರೊಗೆ ಲ್ಯಾಂಡರ್‌ನೊಂದಿಗಿನ ಸಂಪರ್ಕವೇ ಇಲ್ಲವಾಯಿತು.

ಥರ್ಮಲ್‌ ಇಮೇಜ್‌ ಮೂಲಕ ಲ್ಯಾಂಡರ್‌ ಇರುವ ಸ್ಥಳ ಪತ್ತೆ ಮಾಡಲಾಗಿದ್ದು, ಅದರೊಂದಿಗೆ ಸಂಪರ್ಕ ಸಾಧಿಸುವ ಪ್ರಯತ್ನವನ್ನು ಇಸ್ರೊ ವಿಜ್ಞಾನಿಗಳು ಮುಂದುವರಿಸಿದ್ದಾರೆ. ಯೋಜಿಸಿದಂತೆ ನಿಧಾನಗತಿಯಲ್ಲಿ ಲ್ಯಾಂಡರ್‌ ಇಳಿಸಲು ಇಸ್ರೊಗೆ ಸಾಧ್ಯವಾಗಲಿಲ್ಲ. ನಿಯಂತ್ರಣವಿಲ್ಲದೆ ಮುಂದುವರಿದಿರುವ ಲ್ಯಾಂಡರ್‌ ವೇಗವಾಗಿ ನೆಲವನ್ನು ಸ್ಪರ್ಶಿಸಿರುವ ಸಾಧ್ಯತೆ ಹೆಚ್ಚಿದೆ.

’ಲ್ಯಾಂಡರ್‌ ಸ್ಥಿತಿ ಹೇಗಿದೆ, ಅದಕ್ಕೆ ಹಾನಿಯಾಗಿದೆಯೇ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ‘ ಎಂದು ಶಿವನ್‌ ಹೇಳಿದ್ದಾರೆ.

ಚಂದ್ರನ ದಕ್ಷಿಣ ಧ್ರುವದಲ್ಲಿ ಶೋಧಕ ನೌಕೆಯನ್ನು ಇಳಿಸುವಮೊದಲ ಪ್ರಯತ್ನವನ್ನು ಭಾರತ ಮಾಡಿದೆ.

ಇನ್ನಷ್ಟು ಸುದ್ದಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.