ADVERTISEMENT

ಚಂದ್ರಯಾನ–3 ಯೋಜನೆ ವೆಚ್ಚ ಹಾಲಿವುಡ್ ಸಿನಿಮಾ ಬಜೆಟ್‌ಗಿಂತಲೂ ಕಡಿಮೆ: ಕೇಂದ್ರ ಸಚಿವ

ಪಿಟಿಐ
Published 26 ಆಗಸ್ಟ್ 2023, 2:48 IST
Last Updated 26 ಆಗಸ್ಟ್ 2023, 2:48 IST
ಚಂದ್ರಯಾನ-3 ಯೋಜನೆ
ಚಂದ್ರಯಾನ-3 ಯೋಜನೆ   ಪಿಟಿಐ ಚಿತ್ರ

ನವದೆಹಲಿ: ಭಾರತದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ–3ಕ್ಕೆ ಮಾಡಲಾಗಿರುವ ಅಂದಾಜು ₹600 ಕೋಟಿ ವೆಚ್ಚವು ಹಾಲಿವುಡ್‌ ಸಿನಿಮಾ ಬಜೆಟ್‌ಗಿಂತಲೂ ಕಡಿಮೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಜೀತೇಂದ್ರ ಸಿಂಗ್ ಹೇಳಿದ್ದಾರೆ.

ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್‌ ಇಳಿಸಿದ ಪ್ರಥಮ ರಾಷ್ಟ್ರ ಎನಿಸಿರುವ ಭಾರತ, ಚಂದ್ರನ ಮೇಲೆ ಕಾಲಿಟ್ಟ ವಿಶ್ವದ ನಾಲ್ಕನೇ ರಾಷ್ಟ್ರವಾಗಿ 'ಪ್ರತಿಷ್ಠಿತ ದೇಶಗಳ' ಸಾಲಿಗೆ ಸೇರ್ಪಡೆಯಾಗಿದೆ. ಈ ಬಗ್ಗೆ ಮಾತನಾಡಿರುವ ಸಿಂಗ್‌, 'ಚಂದ್ರಯಾನ ಯೋಜನೆ ಮೂಲಕ ಚಂದ್ರನ ಮೇಲ್ಮೈಯಲ್ಲಿ ಜಲಜನಕ ಮತ್ತು ಆಮ್ಲಜನಕ ಲಭ್ಯತೆಯ ಕುರಿತು ಭಾರತ ನಡೆಸುತ್ತಿರುವ ವೈಜ್ಞಾನಿಕ ಸಂಶೋಧನೆಯು ಇತರ ರಾಷ್ಟ್ರಗಳ ಕಾರ್ಯಾಚರಣೆಗಳಿಗಿಂತ ಭಿನ್ನವಾಗಿದೆ' ಎಂದಿದ್ದಾರೆ.

ಬಾಹ್ಯಾಕಾಶ ಇಲಾಖೆಗೆ ಕೇಂದ್ರ ಸರ್ಕಾರದ ಅನುದಾನ ಕಡಿತ!

ADVERTISEMENT

'ಚಂದ್ರಯಾನ–3 ಯೋಜನೆಯ ವೆಚ್ಚ ಕೇವಲ ₹ 600 ಕೋಟಿ. ಬಾಹ್ಯಾಕಾಶ ಹಾಗೂ ಚಂದ್ರನ ವಿಷಯವಾಗಿ ಹಾಲಿವುಡ್‌ನಲ್ಲಿ ನಿರ್ಮಾಣವಾಗಿರುವ ಸಿನಿಮಾಗಳ ವೆಚ್ಚವೇ ಅದಕ್ಕಿಂತಲೂ ಹೆಚ್ಚು. ಇತ್ತೀಚಿನ ದಿನಗಳಲ್ಲಿ ನಾನು ಸಿನಿಮಾಗಳನ್ನು ಹೆಚ್ಚಾಗಿ ನೋಡುವುದಿಲ್ಲ. ಆದರೆ, ಒಬ್ಬ ಅಥವಾ ಇಬ್ಬರು ದೊಡ್ಡ ನಟರು (ಬಾಲಿವುಡ್‌ನಲ್ಲಿ) ಪ್ರತಿ ಸಿನಿಮಾಗೆ ₹ 100 ವೆಚ್ಚ ಸಂಭಾವನೆ ಪಡೆಯುತ್ತಾರೆ ಎಂಬುದನ್ನು ಕೇಳಿದ್ದೇನೆ. ಇದು ದಿಲೀಪ್‌ ಕುಮಾರ್‌ ಅವರಂತಹ ಸ್ಟಾರ್‌ ನಟ ದೇವದಾಸ್‌ ಸಿನಿಮಾಗೆ ಪಡೆದಿದ್ದ ₹ 5–6 ಲಕ್ಷಕ್ಕಿಂತ ಬಹಳಷ್ಟು ಅಧಿಕ' ಎಂದು ಸಿಂಗ್‌ ಹೇಳಿದ್ದಾರೆ.

ಚಂದ್ರಯಾನ–3ರ ಯಶಸ್ಸಿನ ಬೆನ್ನಲ್ಲೇ ಶುಕ್ರ ಗ್ರಹಕ್ಕೆ ಬಾಹ್ಯಾಕಾಶ ನೌಕೆ ಮತ್ತು ಮಂಗಳ ಗ್ರಹಕ್ಕೆ ಲ್ಯಾಂಡರ್‌ ಕಳುಹಿಸುವ ಆಸೆ ಮೊಳೆತಿದೆ.

ಸೂರ್ಯನ ಅಧ್ಯಯನಕ್ಕೆ ಈಗಾಗಲೇ ನಿಗದಿಯಾಗಿರುವ ಆದಿತ್ಯ–ಎಲ್‌ 1 ಉಪಗ್ರಹ ರವಾನೆಗೆ ಇಸ್ರೊ ಸಿದ್ಧತೆ ನಡೆಸುತ್ತಿದ್ದು, ಆ ಕುರಿತ ಚರ್ಚೆಗೆ ಸೆಪ್ಟೆಂಬರ್‌ 2ರಂದು ಸಭೆ ನಡೆಯಲಿದೆ ಎಂದೂ ಅವರು ತಿಳಿಸಿದ್ದಾರೆ.

ವಿಜ್ಞಾನಿಗಳ ಅಭಿನಂದಿಸಲು ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ಮೋದಿ: ಇಸ್ರೊಗೆ ಭೇಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.