
ನವದೆಹಲಿ: ಭಾರತ ಚಂದ್ರನ ಮೇಲೆ ಕಾಲಿಟ್ಟ ಆಗಸ್ಟ್ 23ರ ದಿನವನ್ನು ’ರಾಷ್ಟ್ರೀಯ ಬಾಹ್ಯಾಕಾಶ ದಿನ’ ಎಂದು ಪ್ರಧಾನಿ ನರೇಂದ್ರ ಮೋದಿಯವರು ಘೋಷಣೆ ಮಾಡಿದ್ದು, ಚಂದ್ರಯಾನದಲ್ಲಿ ಭಾರತ ಗಳಿಸಿದ ಯಶಸ್ವಿಯನ್ನು ಮುಂದಿನ ಪೀಳಿಗೆಗೆ ನೆನಪು ಮಾಡಿಕೊಡುವುದಲ್ಲದೆ, ವಿಜ್ಞಾನಿಗಳಿಗೆ ಇನ್ನಷ್ಟು ಸಾಧಿಸಲು ಉತ್ತೇಜನ ನೀಡಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಯಾವುದೇ ಸಂದರ್ಭ ಇರಲಿ, ಜನರ ಜತೆ ನಿಲ್ಲುವವನೇ ನಿಜವಾದ ನಾಯಕ. ಗ್ರೀಸ್‌ನಿಂದ ನೇರವಾಗಿ ಬೆಂಗಳೂರಿಗೆ ಮುಂಜಾನೆ ಬಂದು ಚಂದ್ರಯಾನ–3ರ ಹಿಂದಿದ್ದ ವಿಜ್ಞಾನಿಗಳನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದು ಇದರ ಪ್ರತಿಫಲನ ಎಂದು ಅವರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ವಿಜ್ಞಾನಿಗಳನ್ನು ಉದ್ದೇಶಿಸಿ ಪ್ರಧಾನಿ ಮಾಡಿದ ಸ್ಪೂರ್ತಿದಾಯಕ ಭಾಷಣವು, ಅಂಬರ ತಲುಪಿದ ಭಾರತದ ಅದ್ಭುತ ಸಾಧನೆಯ ದ್ಯೋತಕವಾಗಿದೆ ಎಂದು ಶಾ ತಿಳಿಸಿದ್ದಾರೆ.
’ಇಂದು ಪ್ರಧಾನಿ ನರೇಂದ್ರ ಮೋದಿಯವರು ‘ರಾಷ್ಟ್ರೀಯ ಬಾಹ್ಯಾಕಾಶ ದಿನ’ವನ್ನು ಘೋಷಣೆ ಮಾಡಿದ್ದಾರೆ. ಇದರಿಂದ ಈ ಯೋಜನೆಯ ಹಿಂದಿನ ಭಾರತದ ವಿಜ್ಞಾನಿಗಳ ಯಶಸ್ಸಿನ ಕಥೆಯು ಭವಿಷ್ಯದ ಪೀಳಿಗೆಯನ್ನು ತಲುಪುತ್ತದೆ. ಈ ನಿರ್ಧಾರವು ಭಾರತೀಯ ವಿಜ್ಞಾನಿಗಳನ್ನು ಬಾಹ್ಯಾಕಾಶ ಪರಿಶೋಧನೆಯ ಕ್ಷೇತ್ರದಲ್ಲಿ ಹೊಸ ಎತ್ತರವನ್ನು ಸಾಧಿಸಲು ಪ್ರೇರೇಪಿಸುತ್ತದೆ’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.