ADVERTISEMENT

ಕವಿ ವರವರ ರಾವ್‌ಗೆ ಜಾಮೀನು ಬೇಡ: ಬಾಂಬೆ ಹೈಕೋರ್ಟ್‌ಗೆ ಎನ್ಐಎ

ಪಿಟಿಐ
Published 21 ಮಾರ್ಚ್ 2022, 14:17 IST
Last Updated 21 ಮಾರ್ಚ್ 2022, 14:17 IST
ವರವರ ರಾವ್, ತೆಲುಗು ಕವಿ
ವರವರ ರಾವ್, ತೆಲುಗು ಕವಿ   

ಮುಂಬೈ:ಎಲ್ಗಾರ್‌ ಪರಿಷತ್‌– ಮಾವೊವಾದಿ ಸಂಪರ್ಕ ಪ್ರಕರಣದಲ್ಲಿ ಬಂಧಿತರಾಗಿರುವತೆಲುಗು ಕವಿ ವರವರ ರಾವ್ ಅವರು ಸಲ್ಲಿಸಿದ ವೈದ್ಯಕೀಯ ಕಾಯಂಜಾಮೀನು ಅರ್ಜಿಯನ್ನು ತಿರಸ್ಕರಿಸಬೇಕು ಎಂದು ರಾಷ್ಟ್ರೀಯ ತನಿಖಾ ದಳ(ಎನ್ಐಎ) ಬಾಂಬೆ ಹೈಕೋರ್ಟ್‌ಗೆ ಒತ್ತಾಯಿಸಿದೆ.

ಅವರ ವಿರುದ್ಧ ಗಂಭೀರ ಸ್ವರೂಪದ ಆರೋಪಗಳಿವೆ. ಅವುಗಳು ಸಾಬೀತಾದರೆ, ಅವರಿಗೆ ಮರಣ ದಂಡನೆ ಶಿಕ್ಷೆಯೂ ಆಗಬಹುದು ಎಂದು ಎನ್ಐಎ ಹೇಳಿದೆ. ಈ ವೇಳೆ ಎಲ್ಲಾ ವಾದ-ಪ್ರತಿವಾದಗಳನ್ನು ಆಲಿಸಿದ ಬಾಂಬೆ ಹೈಕೋರ್ಟ್, ಈ ಕುರಿತಾದ ತೀರ್ಪು ನೀಡುವವರೆಗೆ ವರವರ ರಾವ್ ಅವರು ತಲೋಜಾ ಜೈಲಿನ ಅಧಿಕಾರಿಗಳ ಬಳಿ ಶರಣಾಗತರಾಗುವ ಅಗತ್ಯವಿಲ್ಲ ಎಂದು ಹೇಳಿದೆ.

ಬಾಂಬೆ ಹೈಕೋರ್ಟ್‌ನಲ್ಲಿ ಸೋಮವಾರ ಎನ್ಐಎ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ಅವರು, 'ವರವರ ರಾವ್ ಅವರು ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿರಬಹುದು. ಅವರಿಗೆ ಅಗತ್ಯವಿರುವ ವೈದ್ಯಕೀಯ ನೆರವು ನೀಡಲಾಗುತ್ತದೆ. ವೈದ್ಯರ ವರದಿಗಳನ್ನು ಆಧರಿಸಿ ಅವರಿಗೆ ಕಳೆದ ವರ್ಷ ತಾತ್ಕಾಲಿಕವಾಗಿ ವೈದ್ಯಕೀಯ ಜಾಮೀನು ನೀಡಲಾಗಿದೆ. ಆದರೆ ಈಗ ಅವರು ಆಸ್ಪತ್ರೆಯಿಂದ ಬಿಡುಗಡೆ ಹೊಂದಲು ಅರ್ಹರಾಗಿದ್ದಾರೆ. ಹೀಗಿದ್ದಾಗ ಅವರಿಗೆ ಕಾಯಂವೈದ್ಯಕೀಯ ಜಾಮೀನಿನ ಪ್ರಶ್ನೆ ಎಲ್ಲಿಂದ ಉದ್ಭವಿಸಲಿದೆ? ತಮ್ಮ ವಿರುದ್ಧದ ವಿಚಾರಣೆ ಪೂರ್ತಿ ಮುಗಿಯುವವರೆಗೆ ಜಾಮೀನಿನ ಮೇಲೆ ಇರಲು ಬಯಸಿದ್ದಾರೆಯೇ?' ಎಂದು ಹೇಳಿದರು.

ADVERTISEMENT

ಈ ವೇಳೆ ಕವಿ ವರವರ ರಾವ್ ಪರ ವಾದಿಸಿದ ಹಿರಿಯ ವಕೀಲ ಆನಂದ್ ಗ್ರೋವರ್ ಅವರು, 'ರಾವ್ ಅವರು ಮಿದುಳು ಮತ್ತು ನರಮಂಡಲಕ್ಕೆ ಸಂಬಂಧಿಸಿದ ಕಾಯಿಲೆಯ ಮೊದಲ ಹಂತದಲ್ಲಿದ್ದಾರೆ. ಅವರಲ್ಲಿ ರಕ್ತ ಹೆಪ್ಪುಗಟ್ಟುವ ಅಪಾಯವಿದೆ ಎಂಬ ವರದಿಯನ್ನು ಎನ್ಐಎ ಓದಿಲ್ಲ. ಅಥವಾ ಗಂಭೀರ ಕಾಯಿಲೆ ಬಗ್ಗೆ ಎನ್ಐಎಗೆ ಏನೂ ಗೊತ್ತಿಲ್ಲ. ತಲೋಜಾ ಜೈಲಿನಲ್ಲಿ ಇಂಥ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತೀರಿ. ನಿಮ್ಮಲ್ಲಿ ಅಲೋಪತಿ ವೈದ್ಯರು ಸಹ ಇಲ್ಲ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.