ADVERTISEMENT

ಐಷಾರಾಮಿ ಹೋಟೆಲ್‌ಗೆ ₹23.46 ಲಕ್ಷ ಪಾವತಿಸದೆ ಪರಾರಿ: ದ.ಕ ಜಿಲ್ಲೆಯಲ್ಲಿ ಬಂಧನ

ಯುಎಇ ರಾಜಮನೆತನದ ಅಧಿಕಾರಿ ಸೋಗಿನಲ್ಲಿ ಸುಮಾರು 4 ತಿಂಗಳು ದೆಹಲಿಯ ಹೋಟೆಲ್‌ನಲ್ಲಿ ವಾಸ

​ಪ್ರಜಾವಾಣಿ ವಾರ್ತೆ
Published 23 ಜನವರಿ 2023, 1:10 IST
Last Updated 23 ಜನವರಿ 2023, 1:10 IST
ಪೊಲೀಸರ ವಶದಲ್ಲಿ ಆರೋಪಿ ಮಹಮ್ಮದ್ ಶರೀಫ್‌ –ಟ್ವಿಟರ್‌ ಚಿತ್ರ
ಪೊಲೀಸರ ವಶದಲ್ಲಿ ಆರೋಪಿ ಮಹಮ್ಮದ್ ಶರೀಫ್‌ –ಟ್ವಿಟರ್‌ ಚಿತ್ರ   

ನವದೆಹಲಿ: ‘ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನ (ಯುಎಇ) ರಾಜಮನೆತನದ ಅಧಿಕಾರಿ ಎಂದು ಹೇಳಿಕೊಂಡು ಇಲ್ಲಿನ ಲೀಲಾ ಪ್ಯಾಲೇಸ್‌ ಹೋಟೆಲ್‌ನಲ್ಲಿ ತಂಗಿದ್ದಲ್ಲದೇ, ₹23.46 ಲಕ್ಷ ಬಿಲ್‌ ಮೊತ್ತ ಪಾವತಿಸದೆ ಪರಾರಿಯಾಗಿದ್ದ ವ್ಯಕ್ತಿಯನ್ನು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಆತನ ಮನೆಯಲ್ಲಿ ಬಂಧಿಸಲಾಗಿದೆ’ ಎಂದು ಪೊಲೀಸರು ಭಾನುವಾರ ಹೇಳಿದ್ದಾರೆ.

‘ಮಹಮ್ಮದ್‌ ಶರೀಫ್‌ ಬಂಧಿತ. ತಾನು ಯುಎಇ ಅಧ್ಯಕ್ಷ ಶೇಖ್‌ ಫಲಾಹ್‌ ಬಿನ್‌ ಜಾಯೇದ್‌ ಅಲ್ ನಹ್ಯಾನ್‌ ಅವರ ಕಚೇರಿಯ ಉನ್ನತ ಅಧಿಕಾರಿ ಎಂದು ಹೇಳಿಕೊಂಡಿದ್ದ ಈತ, ಕಳೆದ ವರ್ಷದ ಆಗಸ್ಟ್‌ 1ರಂದು ಕೊಠಡಿ ಪಡೆದಿದ್ದ. ಈ ವೇಳೆ ಹೋಟೆಲ್‌ ಸಿಬ್ಬಂದಿಗೆ ನಕಲಿ ಬ್ಯುಸಿನೆಸ್‌ ಕಾರ್ಡ್‌ ಹಾಗೂ ಯುಎಇ ನಿವಾಸಿ ಪ್ರಮಾಣ ಪತ್ರ ಒದಗಿಸಿದ್ದ’ ಎಂದು ತಿಳಿಸಿದ್ದಾರೆ.

‘ಆರೋಪಿಯು ನವೆಂಬರ್‌ 20ರವರೆಗೂ ಹೋಟೆಲ್‌ನ ಕೊಠಡಿ ಸಂಖ್ಯೆ 427ರಲ್ಲಿ ತಂಗಿದ್ದ. ಈತ ‘ಸಿಲ್ವರ್‌ ಬಾಟಲ್‌ ಹೋಲ್ಡರ್‌’ ಸೇರಿದಂತೆ ಕೊಠಡಿಯಲ್ಲಿದ್ದ ಕೆಲ ಬೆಲೆ ಬಾಳುವ ವಸ್ತುಗಳನ್ನೂ ಕಳವು ಮಾಡಿಕೊಂಡು ಹೋಗಿದ್ದಾನೆ. ಈ ಕುರಿತು ಹೋಟೆಲ್‌ನ ಆಡಳಿತವು ದೂರು ನೀಡಿತ್ತು’ ಎಂದಿದ್ದಾರೆ.

ADVERTISEMENT

‘ಹೋಟೆಲ್‌ನ ಒಳಗೆ ಹಾಗೂ ಹೊರಭಾಗದ ಆವರಣದಲ್ಲಿ ಅಳವಡಿಸಲಾಗಿದ್ದ ಸಿ.ಸಿ.ಟಿ.ವಿ. ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿತ್ತು. ಆರೋಪಿಯ ಪತ್ತೆಗೆ ಹಲವು ತಂಡಗಳನ್ನೂ ರಚಿಸಲಾಗಿತ್ತು. ಆತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ತನ್ನ ಮನೆಯಲ್ಲಿ ಇರುವ ಮಾಹಿತಿ ಸಿಕ್ಕಿತ್ತು. ಇದೇ 19ರಂದು ಆತನನ್ನು ಬಂಧಿಸಲಾಗಿತ್ತು’ ಎಂದು ಮಾಹಿತಿ ನೀಡಿದ್ದಾರೆ.

‘ತಮ್ಮನ್ನು ವಂಚಿಸಬೇಕೆಂದು ತೀರ್ಮಾನಿಸಿದ್ದ ಆರೋಪಿಯು ಮೊದಲು ಸಿಬ್ಬಂದಿಯ ನಂಬಿಕೆ ಗಳಿಸಲು ಮುಂದಾಗಿದ್ದ. ಇದಕ್ಕಾಗಿ ಉದ್ದೇಶಪೂರ್ವಕವಾಗಿಯೇ ನಕಲಿ ಬ್ಯುಸಿನೆಸ್‌ ಕಾರ್ಡ್‌ ಹಾಗೂ ಯುಎಇ ನಿವಾಸಿ ಪ್ರಮಾಣ ಪತ್ರ ಒದಗಿಸಿದ್ದ. ಆಗಸ್ಟ್‌ ಮತ್ತು ಸೆಪ್ಟೆಂಬರ್‌ನಲ್ಲಿ ಆತ ಕೆಲ ಕಂತುಗಳಲ್ಲಿ ₹11.5 ಲಕ್ಷ ಪಾವತಿಸಿದ್ದ. ₹23,48,413 ಮೊತ್ತ ಬಾಕಿ ಇತ್ತು. ಇದಕ್ಕಾಗಿ ₹20 ಲಕ್ಷದ ಚೆಕ್‌ ನೀಡಿದ್ದ. ಸೆಪ್ಟೆಂಬರ್‌ 22ರಂದು ಅದನ್ನು ಬ್ಯಾಂಕ್‌ಗೆ ನೀಡಲಾಗಿತ್ತು. ಆತನ ಖಾತೆಯಲ್ಲಿ ಹಣ ಇಲ್ಲದಿದ್ದರಿಂದ ಅದು ‘ಬೌನ್ಸ್‌’ ಆಗಿತ್ತು. ಆತ ನವೆಂಬರ್‌ 20ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಹೋಟೆಲ್‌ನಿಂದ ಪರಾರಿಯಾಗಿದ್ದ ಎಂದು ಹೋಟೆಲ್‌ ಆಡಳಿತ ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ’ ಎಂದು ವಿವರಿಸಿದ್ದಾರೆ.

ಈ ಕುರಿತು ಮಾಹಿತಿ ಪ‍ಡೆಯಲು ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್‌ ವರಿಷ್ಠಾಧಿಕಾರಿಯವರನ್ನು ದೂರವಾಣಿ ಮೂಲಕ ಸಂಪರ್ಕಿಸಲಾಯಿತು. ಅವರು ಶರೀಫ್‌ ಬಂಧನದ ವಿಷಯ ಖಾತರಿಪಡಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.