ADVERTISEMENT

ಚೆನ್ನೈ, ಉತ್ತರ ತಮಿಳುನಾಡಲ್ಲಿ ಇಂದು ಭಾರಿ ಮಳೆ ಸಂಭವ: ಹವಾಮಾನ ಇಲಾಖೆ ಮುನ್ಸೂಚನೆ

ಪ್ರಜಾವಾಣಿ ವಿಶೇಷ
Published 18 ನವೆಂಬರ್ 2021, 4:31 IST
Last Updated 18 ನವೆಂಬರ್ 2021, 4:31 IST
ಎಎಫ್‌ಪಿ ಚಿತ್ರ
ಎಎಫ್‌ಪಿ ಚಿತ್ರ   

ಚೆನ್ನೈ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ಚೆನ್ನೈ ನಗರ ಮತ್ತು ತಮಿಳುನಾಡಿನ ಉತ್ತರ ಭಾಗದ ಜಿಲ್ಲೆಗಳಲ್ಲಿ ಗುರುವಾರ ಭಾರಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ವಾರದ ಹಿಂದಷ್ಟೆ ಕುಂಭದ್ರೋಣ ಮಳೆಯಿಂದ ತತ್ತರಿಸಿರುವ ಚೆನ್ನೈ ಜನರಿಗೆ ಈ ಮುನ್ಸೂಚನೆ ಮತ್ತೆ ಆತಂಕ ತಂದಿದೆ.

ಹವಾಮಾನ ಇಲಾಖೆ ಮತ್ತು ಸ್ವತಂತ್ರ ಹವಾಮಾನ ಬ್ಲಾಗರ್‌ಗಳು ರಾಜ್ಯದ ಚೆನ್ನೈ, ಕಾಂಚೀಪುರಂ, ತಿರುವಳ್ಳೂರು, ಚೆಂಗಲ್ಪಟ್ಟು, ಕಡಲೂರು ಜಿಲ್ಲೆಗಳು ಮತ್ತು ನೆರೆಯ ಪುದುಚೇರಿಯಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಬಹುತೇಕ ಭಾಗಗಳಲ್ಲಿ ಬುಧವಾರ ಲಘು ಮಳೆಯಾಗಿದೆ. ಆದರೆ, ಕ್ರಮೇಣ ಮಳೆಯ ತೀವ್ರತೆ ಹೆಚ್ಚಾಗುತ್ತದೆ ಎಂದು ಬ್ಲಾಗರ್‌ಗಳು ಹೇಳಿದ್ದಾರೆ.

ADVERTISEMENT

ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ಮಳೆಯನ್ನು ಎದುರಿಸಲು ಸಿದ್ಧತೆ ನಡೆಸಿರುವುದಾಗಿ ಗ್ರೇಟರ್ ಚೆನ್ನೈ ಕಾರ್ಪೊರೇಷನ್ (ಜಿಸಿಸಿ) ತಿಳಿಸಿದೆ. ಸ್ಥಳೀಯ ಪ್ರದೇಶಗಳು ಮತ್ತು ಸುರಂಗಮಾರ್ಗಗಳಿಂದ ಮಳೆ ನೀರನ್ನು ತಕ್ಷಣವೇ ಹರಿಸಲು 600ಕ್ಕೂ ಹೆಚ್ಚು ಮೋಟಾರ್ ಪಂಪ್‌ಗಳನ್ನು ಸಿದ್ಧಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಸಂತ್ರಸ್ತರಿಗಾಗಿ ಜಿಸಿಸಿ ಪರಿಹಾರ ಕೇಂದ್ರಗಳು ಮತ್ತು ಸಮುದಾಯ ಅಡುಗೆಮನೆಗಳನ್ನು ಸಹ ಸಿದ್ಧಪಡಿಸಲಾಗಿದೆ.

ಕಳೆದ ವಾರ ಒಂದೇ ವಾರದಲ್ಲಿ ನಗರದಲ್ಲಿ 40 ಸೆಂ.ಮೀ.ಗೂ ಹೆಚ್ಚು ಮಳೆಯಾಗಿದೆ. ನಗರಕ್ಕೆ ಕುಡಿಯುವ ನೀರು ಪೂರೈಸುವ ರೆಡ್ ಹಿಲ್ಸ್, ಶೋಲಾವರಂ ಮತ್ತು ಚೆಂಬರಂಬಾಕ್ಕಂ ಎಂಬ ಮೂರು ಜಲಾಶಯಗಳು ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಲು ಸಿದ್ಧವಾಗಿವೆ.

ಆಗ್ನೇಯ ಬಂಗಾಳ ಕೊಲ್ಲಿಯಲ್ಲಿನ ಕಡಿಮೆ ಒತ್ತಡದ ಪ್ರದೇಶವು ಈಗ ಆಗ್ನೇಯ ಮತ್ತು ಪಕ್ಕದ ನೈಋತ್ಯ ಬಂಗಾಳ ಕೊಲ್ಲಿಯಲ್ಲಿದೆ. ಚಂಡಮಾರುತದ ಪರಿಚಲನೆಯು ಸರಾಸರಿ ಸಮುದ್ರ ಮಟ್ಟದಿಂದ 5.8 ಕಿಮೀ ವರೆಗೆ ವಿಸ್ತರಿಸಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.