
ಚೆನ್ನೈ ಪುಸ್ತಕ ಮೇಳ
ಚೆನ್ನೈ: ಜಾಗತಿಕ ಮಟ್ಟದ ಪ್ರಕಾಶಕರು, ಅನುವಾದಕರ ನೆಚ್ಚಿನ ಮೇಳವಾಗಿ ಮಾರ್ಪಟ್ಟಿರುವ ಚೆನ್ನೈ ಅಂತರರಾಷ್ಟ್ರೀಯ ಪುಸ್ತಕ ಮೇಳದ ನಾಲ್ಕನೇ ಆವೃತ್ತಿಗೆ ಇಲ್ಲಿನ ಕಲೈವಾನರ್ ಅರಂಗಂನಲ್ಲಿ ಶುಕ್ರವಾರ ಅದ್ದೂರಿ ಚಾಲನೆ ದೊರೆಯಿತು.
102 ದೇಶಗಳಿಂದ ಬಂದಿದ್ದ ಪ್ರಕಾಶಕರು, ಅನುವಾದಕರು, ಲೇಖಕರು ಒಂದೇ ವೇದಿಕೆಯಲ್ಲಿ ಮುಖಾಮುಖಿಯಾಗಿ ತಮ್ಮ ದೇಶ, ಭಾಷೆಗಳ ಪುಸ್ತಕಗಳ ಕುರಿತು ಚರ್ಚಿಸಿದರು. ದಕ್ಷಿಣ ಭಾರತದ ಪ್ರಾದೇಶಿಕ ಭಾಷೆಗಳ ಕೃತಿಗಳನ್ನು ತಮಿಳು ಸೇರಿದಂತೆ ಜಗತ್ತಿನ ಇತರ ಭಾಷೆಗಳಿಗೆ ಅನುವಾದಿಸುವ ಕುರಿತು ಮಾತುಕತೆ ನಡೆಸಿದರು.
ಮೇಳದ ಆಶಯ ನುಡಿಗಳನ್ನಾಡಿದ ಕವಯತ್ರಿ, ಸಂಸದೆ ಕೆ. ಕನಿಮೊಳಿ, ‘ಇಂದು ಜಗತ್ತು ಧರ್ಮ, ಜಾತಿ, ಜನಾಂಗ, ಸಾಧ್ಯವಿರುವ ಎಲ್ಲ ವಿಷಯಗಳಲ್ಲೂ ಗೋಡೆಗಳನ್ನು ನಿರ್ಮಿಸುತ್ತಿದೆ. ಆದರೆ, ಇಂಥ ತಡೆಗೋಡೆಗಳನ್ನು ಸಾಹಿತ್ಯ ಮಾತ್ರ ಒಡೆಯಬಲ್ಲದು. ಪ್ರಶ್ನಿಸುವ ಮನೋಭಾವವನ್ನು ಜೀವಂತವಾಗಿಡುವುದೇ ಸಾಹಿತ್ಯದ ಮುಖ್ಯ ಉದ್ದೇಶವಾಗಿದ್ದು, ಬರಹಗಾರನ ಪ್ರತಿ ಸಾಲೂ ಹಳೆಯ ಜಗತ್ತು ಸೃಷ್ಟಿಸಿದ್ದನ್ನು ಪ್ರಶ್ನಿಸುತ್ತಾ ನಮ್ಮನ್ನು ಮರುಚಿಂತನೆ ಮಾಡಲು ಪ್ರೇರೇಪಿಸುತ್ತದೆ. ಹಾಗಾಗಿ, ಬರಹಗಾರರಿಗಷ್ಟೇ ಹೊಸ ಜಗತ್ತನ್ನು ಸೃಷ್ಟಿಸಲು ಸಾಧ್ಯ’ ಎಂದರು.
ತಮ್ಮ ಮಾತುಗಳಲ್ಲಿ ನೆಲ್ಸನ್ ಮಂಡೇಲಾ, ಅಬ್ರಹಾಂ ವರ್ಗೀಸ್, ಇಮೈಯಮ್ ಅವರ ಬದುಕು ಮತ್ತು ಸಾಹಿತ್ಯವನ್ನು ಉಲ್ಲೇಖಿಸಿದ ಅವರು ಲೇಖಕನಿಗೆ ಮಾತ್ರ ಪ್ರಭುತ್ವಕ್ಕೆ ಸವಾಲು ಎಸೆಯುವ ಸಾಮರ್ಥ್ಯವಿರುತ್ತದೆ ಎಂದು ಅಭಿಪ್ರಾಯಪಟ್ಟರು.
ಫ್ರಾಂಕ್‌ಫರ್ಟ್ ಪುಸ್ತಕ ಮೇಳದ ವ್ಯವಹಾರ ಅಭಿವೃದ್ಧಿ ವಿಭಾಗದ ಉಪಾಧ್ಯಕ್ಷೆ ಕ್ಲೌಡಿಯಾ ಕೈಸರ್ ಮಾತನಾಡಿ, ತಮಿಳು ಸಾಹಿತ್ಯವನ್ನು ಜಗತ್ತಿಗೆ ಪರಿಚಯಿಸುವುದು ಮತ್ತು ಸಾಂಸ್ಕೃತಿಕ ವಿನಿಮಯಕ್ಕೆ ಅವಕಾಶಗಳನ್ನು ಸೃಷ್ಟಿಸುವುದು ಫ್ರಾಂಕ್‌ಫರ್ಟ್ ಪುಸ್ತಕ ಮೇಳದ ಪ್ರಮುಖ ಗುರಿಗಳಲ್ಲಿ ಒಂದಾಗಿದೆ ಎಂದರು.
‘ಮನೆಯ ಹೊಸ್ತಿಲು: ಬಂಧನವೋ ಬಿಡುಗಡೆಯೋ’ ಗೋಷ್ಠಿಯಲ್ಲಿ ತಮಿಳು ಲೇಖಕಿ ಸಿ.ಎಸ್. ಲಕ್ಷ್ಮಿ (ಅಂಬೈ) ಮಾತನಾಡಿ, ‘ವಿವಾಹದ ನಂತರ ನಾಟಕಗಳಲ್ಲಿ ನಟಿಸುವುದಿಲ್ಲವೆಂದು ತಮ್ಮ ಪತಿಗೆ ಮಾತು ಕೊಟ್ಟಿದ್ದ ಜಿ.ವಿ. ಮಾಲತಮ್ಮ (ಗುಬ್ಬಿ ವೀರಣ್ಣ ಮಗಳು), ನಾಟಕವೊಂದರಲ್ಲಿ ನಟಿ ಕೈಕೊಟ್ಟಾಗ ಪತಿಯ ಮಾತು ಮೀರಿ ನಟನೆಗೆ ಸಿದ್ಧವಾಗಿದ್ದರು. ಆ ಹೊತ್ತಿನಲ್ಲಿ ಪತಿಯೋ, ನಟನೆಯೋ ಎಂಬ ಆಯ್ಕೆಯನ್ನು ಪತಿ ಇಟ್ಟಾಗ ತಮ್ಮಿಚ್ಛೆಯಂತೆ ನಟನೆಯನ್ನೇ ಆಯ್ಕೆ ಮಾಡಿಕೊಳ್ಳುವ ಮೂಲಕ ಬಂಧಮುಕ್ತರಾದರು’ ಎಂದರು.
ಫ್ರಾನ್ಸ್ ಸಂಶೋಧಕ ಥಾಮಸ್ ಹಿತೋಷಿ, ತಮಿಳು ಕವಯಿತ್ರಿ ಅವ್ವೈ ತಮ್ಮ ಬದುಕಿನ ಕ್ರಮವನ್ನು ಬದಲಿಸಿದ ಕುರಿತು ವಿಶ್ಲೇಷಿಸಿದರು.
ಮೊದಲ ದಿನ ನಡೆದ ಆರು ಗೋಷ್ಠಿಗಳಲ್ಲಿ ತಮಿಳಿನ ಮಹಿಳಾ ಜಗತ್ತು, ದಮನಿತ ಸಾಹಿತ್ಯದ ನೆಲೆ, ಭಾಷಾ ಬೆಳವಣಿಗೆ, ಶ್ರೇಷ್ಠ ಕೃತಿಯ ಮಾನದಂಡ ಕುರಿತು ಚರ್ಚಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.