ADVERTISEMENT

ಚೆನ್ನೈ ಹೊಸ ವಿಮಾನ ನಿಲ್ದಾಣ: ಪ್ರತಿಭಟನೆ ನಡುವೆ ಭೂ ಸ್ಚಾಧೀನ ಚುರುಕು

ಪಿಟಿಐ
Published 7 ನವೆಂಬರ್ 2025, 16:03 IST
Last Updated 7 ನವೆಂಬರ್ 2025, 16:03 IST
   

ಚೆನ್ನೈ: ಗ್ರಾಮಸ್ಥರ ಪ್ರತಿಭಟನೆ ನಡುವೆಯೂ ಚೆನ್ನೈ ಸಮೀಪ ಹೊಸ ಗ್ರೀನ್‌ಫೀಲ್ಡ್‌ ವಿಮಾನ ನಿಲ್ದಾಣ ನಿರ್ಮಿಸಲು ತಮಿಳುನಾಡು ಸರ್ಕಾರ ಭೂಸ್ವಾದೀನ ಪ್ರಕ್ರಿಯೆ ಚುರುಕುಗೊಳಿಸಿದೆ. 

5,746 ಎಕರೆ ಪ್ರದೇಶ ಯೋಜನೆಗೆ ಅಗತ್ಯವಿದ್ದು, ಕಾಂಚಿಪುರಂ ಜಿಲ್ಲೆಯ ಪರಂದೂರಿನಲ್ಲಿ ಈಗಾಗಲೇ ಶೇ 30ರಷ್ಟು (ಸುಮಾರು 3,800 ಎಕರೆ) ಭೂಮಿಯನ್ನು ಖಾಸಗಿಯವರಿಂದ ಸರ್ಕಾರ ಖರೀದಿಸಿದೆ. 2026ರ ವಿಧಾನಸಭೆ ಚುನಾವಣೆಗೂ ಮುನ್ನ ಉಳಿದ ಶೇ 40ರಷ್ಟು ಭೂಮಿ ಖರೀದಿಸುವ ವಿಶ್ವಾಸದಲ್ಲಿ ಸರ್ಕಾರ ಇದೆ.

ಆರಂಭದಲ್ಲಿ ಇಲ್ಲಿನ ಜನರು ಯೋಜನೆಗೆ ಭೂಮಿ ನೀಡಲು ನಿರಾಕರಿಸಿದ್ದರು. ಮಾರ್ಗಸೂಚಿ ದರಕ್ಕಿಂತ ಮೂರರಿಂದ ಏಳುಪಟ್ಟು ಹೆಚ್ಚು ದರ ನಿಗದಿ, ಪುನರ್‌ ವಸತಿ ಕಲ್ಪಿಸುವ ಪರಿಹಾರ ಪ್ಯಾಕೇಜ್‌ ರೈತರ ಪ್ರತಿರೋಧ ತಗ್ಗಿಸುವಲ್ಲಿ ಕೆಲಸ ಮಾಡಿದೆ ಎಂದು ಮೂಲಗಳು ಹೇಳಿವೆ.

ADVERTISEMENT

ಆದರೆ, ಏಕನಾಪುರಂ ಗ್ರಾಮಸ್ಥರು 2022ರಿಂದ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಗ್ರಾಮದ 500 ಎಕರೆ ಭೂಮಿ ಸ್ವಾಧೀನ ಆಗಲಿದ್ದು, ಯೋಜನೆಗಾಗಿ 1000 ಮನೆಗಳ ಪೈಕಿ ಶೇ 60ರಷ್ಟು ಮನೆಗಳನ್ನು ನೆಲಸಮ ಮಾಡಬೇಕಿದೆ. ಗ್ರಾಮಸ್ಥರ ಒಪ್ಪಿಗೆ ಇಲ್ಲದೇ ವಿಮಾನ ನಿಲ್ದಾಣ ಸಾಧ್ಯವಿಲ್ಲ. ನಿಲ್ದಾಣದ ರನ್‌ವೇಗಾಗಿ ಈ ಭೂಮಿ ಅಗತ್ಯವಿದೆ.

ವಿಧಾನಸಭೆ ಚುನಾವಣೆ ಮುಗಿಯುವವರೆಗೂ ಹೋರಾಟವನ್ನು ಬಲಪ್ರಯೋಗದಿಂದ ನಿಯಂತ್ರಿಸದೇ ಇರಲು ಸರ್ಕಾರ ತೀರ್ಮಾನಿಸಿದೆ. ಹೀಗಾಗಿ ಯೋಜನೆ ಒಂದು ವರ್ಷ ವಿಳಂಬವಾಗುವ ಸಾಧ್ಯತೆ ಇದೆ ಎಂದು ಮತ್ತೊಂದು ಮೂಲ ಹೇಳುತ್ತಿದೆ.

ಚೆನ್ನೈಗೆ ಎಲೆಕ್ಟ್ರಾನಿಕ್ಸ್‌, ಆಟೊಮೊಬೈಲ್ಸ್ ಸೇರಿ ವಿವಿಧ ಕ್ಷೇತ್ರದ ಹೂಡಿಕೆ ಆಕರ್ಷಿಸಲು ಪರಂದೂರು ವಿಮಾನ ನಿಲ್ದಾಣ ಅತ್ಯಗತ್ಯ. ಮೀನಂಬಾಕಂನಲ್ಲಿರುವ ಹಾಲಿ ವಿಮಾನ ನಿಲ್ದಾಣಕ್ಕೆ ಬೆಂಗಳೂರು, ಹೈದರಾಬಾದ್ ವಿಮಾನ ನಿಲ್ದಾಣಗಳಷ್ಟು ಮೂಲಸೌಕರ್ಯ ಇಲ್ಲ. ಹೆಚ್ಚುತ್ತಿರುವ ಪ್ರಯಾಣಿಕರ ದಟ್ಟಣೆ ನಿರ್ವಹಿಸುವುದು ಕಷ್ಟವಾಗುತ್ತಿದೆ ಎಂದು ಸರ್ಕಾರ ಹೇಳುತ್ತಿದೆ.

ಮೂಲಗಳ ಪ್ರಕಾರ ಕೇಂದ್ರ ಸರ್ಕಾರ ಈಗಾಗಲೇ ಆರಂಭಿಕ ಅನುಮೋದನೆ ನೀಡಿದ್ದು, ರಾಜ್ಯ ಸರ್ಕಾರ ಗುತ್ತಿಗೆ ಟೆಂಡರ್‌ ಕರೆಯಲು ಸಜ್ಜಾಗುತ್ತಿದೆ. 2006ರಲ್ಲೇ ರೂಪಿಸಲಾಗಿದ್ದ ಈ ಯೋಜನೆ ಪಿಎಂಕೆ ಪಕ್ಷದ ವಿರೋಧದಿಂದಾಗಿ ಮೂರ್ತರೂಪಕ್ಕೆ ಬರಲು ಸಾಧ್ಯವಾಗಿರಲಿಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.