ADVERTISEMENT

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿರುದ್ಧ ಹೇಳಿಕೆ: ಪ್ರಕಾಶಕ ಶೇಷಾದ್ರಿ ಬಂಧನ

​ಪ್ರಜಾವಾಣಿ ವಾರ್ತೆ
Published 29 ಜುಲೈ 2023, 11:13 IST
Last Updated 29 ಜುಲೈ 2023, 11:13 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚೆನ್ನೈ: ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್‌ ವಿರುದ್ಧ  ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದಲ್ಲಿ ಪ್ರಕಾಶಕ ಮತ್ತು ರಾಜಕೀಯ ವಿಶ್ಲೇಷಕ ಬದ್ರಿ ಶೇಷಾದ್ರಿ ಅವರನ್ನು ತಮಿಳುನಾಡು ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಮಣಿಪುರ ಗಲಭೆಯ ಸಂಬಂಧ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಎಚ್ಚರಿಕೆ ನೀಡಿರುವ ವಿಚಾರವಾಗಿ ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಅವರು ಚಂದ್ರಚೂಡ್‌ ಅವರ ವಿರುದ್ಧ ಹೇಳಿಕೆ ನೀಡಿದ್ದರು ಎಂದು ಆರೋಪಿಸಲಾಗಿದೆ.

ವಕೀಲ ಕವಿಅರಸು ಎಂಬುವರು ನೀಡಿರುವ ದೂರಿನ ಅನ್ವಯ ಶೇಷಾದ್ರಿ ಅವರನ್ನು ಪೆರಂಬಲೂರ್‌ನ ಮೈಲಾಪುರದಲ್ಲಿರುವ ಅವರ ನಿವಾಸದಲ್ಲಿ ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಬಿಜೆಪಿ ಬೆಂಬಲಿಗರಾಗಿರುವ ಶೇಷಾದ್ರಿ ಅವರ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಾಗಿದೆ ಎಂದೂ ಹೇಳಿವೆ.

‘ಚಂದ್ರಚೂಡ್‌ ಅವರಿಗೆ ಬಂದೂಕು ಕೊಟ್ಟು ಮಣಿಪುರಕ್ಕೆ ಕಳುಹಿಸೋಣ. ಅವರು ಅಲ್ಲಿ ಶಾಂತಿ ಪುನಃಸ್ಥಾಪಿಸುತ್ತಾರೋ ಎಂದು ನೋಡೋಣ’ ಎಂಬುದಾಗಿ ಶೇಷಾದ್ರಿ ಅವರು ಸಂದರ್ಶನದಲ್ಲಿ ಹೇಳಿದ್ದರು.

ಶೇಷಾದ್ರಿ ಅವರ ಬಂಧನವನ್ನು ಖಂಡಿಸಿರುವ ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಅಣ್ಣಾಮಲೈ, ‘ಸಾಮಾನ್ಯ ಜನರು ನೀಡುವ ಹೇಳಿಕೆಗಳನ್ನು ನಿಭಾಯಿಸಲು ಆಡಳಿತಾರೂಢ ಭ್ರಷ್ಟ ಡಿಎಂಕೆ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ’ ಎಂದು ಟ್ವೀಟ್‌ ಮಾಡಿದ್ದಾರೆ.

ಡಿಎಂಕೆಯ ಪ್ರತೀಕಾರದ ನಡೆಯನ್ನು ಕಾರ್ಯಗತಗೊಳಿಸುವುದು ಪೊಲೀ ಸರ ಕೆಲಸವೇ ಎಂದೂ ಅವರು ಪ್ರಶ್ನಿಸಿದ್ದಾರೆ. ಶೇಷಾದ್ರಿ ಅವರನ್ನು ಬಂಧಿಸಿರುವುದಕ್ಕೆ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಲಕ್ಷ್ಮಿ ರಾಮಚಂದ್ರನ್‌ ಅವರು ಕೂಡ ಟ್ವಿಟರ್‌ನಲ್ಲಿ ಖಂಡನೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.